ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನಲ್ಲಿ ಮತ್ತೆ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಹೆಸರುಗಳು ಒಟ್ಟಾಗಿ ಕೇಳಿಬರುತ್ತಿವೆ. ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರದ ಬಳಿಕ, ಈ ಹಿಟ್ ಜೋಡಿ ಮತ್ತೊಮ್ಮೆ ಒಂದಾಗುವ ಸಾಧ್ಯತೆ ಇದೆ ಎಂಬ ವರದಿಗಳು ಸಿನಿರಸಿಕರ ಗಮನ ಸೆಳೆಯುತ್ತಿವೆ. ರಣವೀರ್ ಸಿಂಗ್ ನಟನೆಯಲ್ಲಿರುವ ಮುಂಬರುವ ಸಿನಿಮಾ ಪ್ರಲೇ (ಪ್ರಳಯ)ಗೆ ನಾಯಕಿಯಾಗಿ ಆಲಿಯಾ ಭಟ್ ಹೆಸರು ಕೇಳಿಬರುತ್ತಿದೆ.
ಮಾಧ್ಯಮ ವರದಿಗಳ ಪ್ರಕಾರ, ಪ್ರಲೇಯ ಕಥೆಯಲ್ಲಿ ನಾಯಕಿಯ ಪಾತ್ರ ಅತ್ಯಂತ ಬಲಿಷ್ಠವಾಗಿದ್ದು, ಅದು ನಾಯಕನ ನೆರಳು ಪಾತ್ರವಲ್ಲ. ಸಂಕಷ್ಟಕ್ಕೆ ಸಿಲುಕಿರುವ ಜಗತ್ತಿನಲ್ಲಿ ತನ್ನದೇ ಆದ ದೃಷ್ಟಿಕೋನದೊಂದಿಗೆ ನಾಯಕನ ನಿರ್ಣಯಗಳನ್ನು ಪ್ರಶ್ನಿಸುವ ಪಾತ್ರಕ್ಕೆ ಆಲಿಯಾ ಭಟ್ ಸೂಕ್ತ ಆಯ್ಕೆ ಎಂದು ನಿರ್ಮಾಪಕರು ಭಾವಿಸಿದ್ದಾರೆ. ಕಥೆಯ ಭಾವನಾತ್ಮಕ ತೂಕವನ್ನು ಹೊರುವ ಸಾಮರ್ಥ್ಯ ಅವರಲ್ಲಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಈ ಚಿತ್ರವನ್ನು ನಿರ್ದೇಶಕ ಜೈ ಮೆಹ್ತಾ ಕೈಗೆತ್ತಿಕೊಂಡಿದ್ದು, ಇದು ಅವರ ಮೊದಲ ಫೀಚರ್ ಫಿಲ್ಮ್ ಆಗಿದೆ. ಚಿತ್ರಕ್ಕೆ 2026ರ ಮಧ್ಯಭಾಗದಲ್ಲಿ ಚಿತ್ರೀಕರಣ ಆರಂಭವಾಗುವ ಸಾಧ್ಯತೆ ಇದೆ. ಝೋಂಬಿ ಶೈಲಿಯನ್ನು ಬಳಸಿಕೊಂಡು ಸಮಾಜದ ಕುಸಿತ, ಮಾನವೀಯ ಮೌಲ್ಯಗಳ ಕ್ಷೀಣತೆ ಮತ್ತು ಬದುಕುಳಿಯುವ ಹೋರಾಟವನ್ನು ಚಿತ್ರ ಅನಾವರಣಗೊಳಿಸಲಿದೆ. ಭವ್ಯ ಸೆಟ್‌ಗಳ ಜೊತೆಗೆ ಎಐ ಆಧಾರಿತ ತಂತ್ರಜ್ಞಾನವನ್ನು ಬಳಸಿ ವಿಭಿನ್ನ ದೃಶ್ಯಭಾವವನ್ನು ಸೃಷ್ಟಿಸುವ ಯೋಜನೆಯೂ ಇದೆ ಎನ್ನಲಾಗಿದೆ.

