ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಚಿತ್ರರಂಗದಲ್ಲಿ ಹೊಸ ಕಾಂಬಿನೇಷನ್ ಗಳಿಗೆ ಬರಗಾಲವಿಲ್ಲ. ಹೊಸ ಹೊಸ ಕಥೆಯೊಂದಿಗೆ ಹೊಸ ಹೊಸ ಜೋಡಿಗಳ ಎಂಟ್ರಿ ಆಗ್ತಾನೆ ಇರುತ್ತೆ. ಈಗ ಅದೇ ರೀತಿಯ ಹೊಸ ಜೋಡಿಯ ಕಥೆಯೊಂದು ನಿಮ್ಮ ಮುಂದೆ ಬರೋದಕ್ಕೆ ರೆಡಿ ಆಗಿದೆ.
ಹೌದು! ಒಂದೆಡೆ ಯುವ ನಟಿ ರುಕ್ಮಿಣಿ ವಸಂತ್, ಮತ್ತೊಂದೆಡೆ ಕನ್ನಡದ ಜನಪ್ರಿಯ ನಟಿ ಮಾಲಾಶ್ರೀ. ಇಬ್ಬರೂ ಇದೇ ಮೊದಲ ಬಾರಿಗೆ ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡಿರುವ ‘ಮಂಗಳ ಗೌರಿ’ ಚಿತ್ರದ ಫಸ್ಟ್‌ಲುಕ್ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ಇದರ ಸ್ಪೆಷಲ್ ಏನು ಅಂದ್ರೆ ಸಾಮಾನ್ಯ ಮಾಸ್ ಹೀರೋ ಪರಿಚಯದ ಪೋಸ್ಟರ್‌ಗಿಂತ ಸಂಪೂರ್ಣ ಭಿನ್ನವಾಗಿದ್ದು, ಇಬ್ಬರು ಮಹಿಳಾ ಪಾತ್ರಗಳ ಸುತ್ತ ಕಥೆ ಸಾಗುವ ಸುಳಿವು ನೀಡಿದೆ.

ಪೊಲೀಸ್ ಅಧಿಕಾರಿಯಾದ ರುಕ್ಮಿಣಿ
ಫಸ್ಟ್‌ಲುಕ್‌ನಲ್ಲಿ ರುಕ್ಮಿಣಿ ವಸಂತ್ ಖಾಕಿ ಸಮವಸ್ತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡರೆ, ಮಾಲಾಶ್ರೀ ನಾಗರಿಕ ಉಡುಪಿನಲ್ಲಿ ಅವರ ಪಕ್ಕದಲ್ಲಿದ್ದಾರೆ. ಕೈಯಲ್ಲಿರುವ ಲಗೇಜ್, ಸ್ಕೂಟರ್ ಮತ್ತು ಲಖನೌ ನಗರದ ಹಿನ್ನೆಲೆ ಪೋಸ್ಟರ್‌ಗೆ ವಿಭಿನ್ನ ಲುಕ್ ನೀಡಿದೆ.
‘COACH’ ಮತ್ತು ‘Gowri. R’
ಇದಕ್ಕೂ ಮುನ್ನ ಬಿಡುಗಡೆಯಾಗಿದ್ದ ಟೀಸರ್ ಪೋಸ್ಟರ್‌ನಲ್ಲಿ ‘COACH’ ಎಂದು ಬರೆದಿರುವ ಕಪ್ಪು ಟ್ರ್ಯಾಕ್‌ಸೂಟ್ ಹಾಗೂ ‘Gowri. R’ ಹೆಸರಿರುವ ಖಾಕಿ ಶರ್ಟ್ ಕಾಣಿಸಿಕೊಂಡಿತ್ತು. ಇದೀಗ ಫಸ್ಟ್‌ಲುಕ್‌ನಲ್ಲಿ ರುಕ್ಮಿಣಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಆ ಹಿಂದಿನ ಸುಳಿವುಗಳಿಗೆ ಮತ್ತಷ್ಟು ಅರ್ಥ ನೀಡಿದೆ.
‘ಸಕುಟುಂಬ ಸಮೇತ’ ಚಿತ್ರದ ಮೂಲಕ ಗಮನ ಸೆಳೆದಿರುವ ನಿರ್ದೇಶಕ ರಾಹುಲ್ ಪಿಕೆ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ರಾಹುಲ್ ಪಿಕೆ ಹಾಗೂ ಪೂಜಾ ಸುಧೀರ್ ಕಥೆ-ಚಿತ್ರಕಥೆಯಲ್ಲಿ ಕೆಲಸ ಮಾಡಿದ್ದಾರೆ. ಮಿಧುನ್ ಮುಕುಂದನ್ ಸಂಗೀತ, ಶ್ರೀವತ್ಸನ್ ಸೆಲ್ವರಾಜನ್ ಛಾಯಾಗ್ರಹಣ ಹಾಗೂ ವಿಶಾಲ್ ಕೃಷ್ಣಮೂರ್ತಿ ಸಂಕಲನ ಚಿತ್ರಕ್ಕಿದೆ.
ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಹೇಮಂತ್ ಎಂ. ರಾವ್ ಅವರ ದಕ್ಷಾಯಣಿ ಟಾಕೀಸ್ ಜಂಟಿಯಾಗಿ ಚಿತ್ರವನ್ನು ನಿರ್ಮಿಸುತ್ತಿವೆ. ವೆಂಕಟ್ ಕೆ. ನಾರಾಯಣ ಹಾಗೂ ಹೇಮಂತ್ ಎಂ. ರಾವ್ ನಿರ್ಮಾಪಕರಾಗಿದ್ದಾರೆ.



