ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಗ ಎಲ್ಲೆಲ್ಲೂ ಸಿನಿಮಾ ಪ್ರಿಯರ ಬಾಯಲ್ಲಿ ಒಂದೇ ಮಾತು, ಅದೇ ‘ಮಂಡಾಡಿ’. ಹಾಸ್ಯ ನಟನಾಗಿ ಚಿತ್ರರಂಗಕ್ಕೆ ಬಂದು, ಈಗ ಸಾಲಿಡ್ ಹೀರೋ ಆಗಿ ಸೈ ಎನಿಸಿಕೊಂಡಿರೋ ಸೂರಿ ಮತ್ತು ತೆಲುಗಿನ ನಟ ಸುಹಾಸ್ ಜೋಡಿಯಾಗಿ ನಟಿಸಿರೋ ಈ ಸ್ಪೋರ್ಟ್ಸ್ ಆಕ್ಷನ್ ಡ್ರಾಮಾ ಚಿತ್ರಮಂದಿರಗಳಲ್ಲಿ ನಿಜವಾದ ಹೈಪ್ ಸೃಷ್ಟಿ ಮಾಡಿದೆ.

ಸಿನಿಮಾ ರಿಲೀಸ್ ಆಗಿ ವೀಕೆಂಡ್ ಮುಗಿಯೋದರ ಒಳಗೆ ಭರ್ಜರಿ ಕಲೆಕ್ಷನ್ ಮಾಡಿದೆ. ಅದರಲ್ಲೂ ಭಾನುವಾರ ಒಂದೇ ದಿನ ಬರೋಬ್ಬರಿ 14.25 ಕೋಟಿ ರೂಪಾಯಿ ಬಾಚಿಕೊಂಡಿದೆ ಅಂದ್ರೆ ಈ ಸಿನಿಮಾಗೆ ಜನ ಹೇಗೆ ಮುಗಿಬಿದ್ದಿದ್ದಾರೆ ಅನ್ನೋದು ಗೊತ್ತಾಗ್ತಿದೆ. ಇದರೊಂದಿಗೆ ಇಂಡಿಯನ್ ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾದ ಒಟ್ಟು ನಾಲ್ಕು ದಿನಗಳ ಕಲೆಕ್ಷನ್ ಬರೋಬ್ಬರಿ 38.25 ಕೋಟಿ ರೂಪಾಯಿ ತಲುಪಿದೆ. ಜನರಿಂದ ಸಿಗುತ್ತಿರೋ ಪ್ರತಿಕ್ರಿಯೆ ನೋಡಿದ್ರೆ ಈ ಸಿನಿಮಾ ಈಗಾಗಲೇ ಸೂಪರ್ ಹಿಟ್ ಲಿಸ್ಟ್‌ಗೆ ಸೇರಿಹೋಗಿದೆ.
ಈ ಕಲೆಕ್ಷನ್ ಸಿಂಹಪಾಲು ಬಂದಿರೋದು ತಮಿಳುನಾಡಿನಿಂದಲೇ. ಹೋಮ್ ಸ್ಟೇಟ್ ತಮಿಳುನಾಡಿನಲ್ಲಿ ನಾಲ್ಕು ದಿನಕ್ಕೆ ಬರೋಬ್ಬರಿ 27.75 ಕೋಟಿ ರೂಪಾಯಿ ಹರಿದುಬಂದಿದೆ. ಇನ್ನು ತೆಲುಗು ರಾಜ್ಯಗಳಲ್ಲಿ 6.10 ಕೋಟಿ ಗಳಿಸಿದ್ರೆ, ನಮ್ಮ ಕರ್ನಾಟಕದಲ್ಲಿ 3.10 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ದೇಶದ ಉಳಿದ ಭಾಗಗಳಿಂದ 1.30 ಕೋಟಿ ಬಂದಿದ್ದು, ಒಟ್ಟಾರೆ ಸಿನಿಮಾ ಎಲ್ಲ ಕಡೆಯೂ ಬಂಪರ್ ಪ್ರದರ್ಶನ ಕಾಣ್ತಿದೆ.

ಸೂರಿ ಮತ್ತು ಸುಹಾಸ್ ಜೋಡಿಯ ನಟನೆಗೆ ಥಿಯೇಟರ್‌ಗಳಲ್ಲಿ ಚಪ್ಪಾಳೆಗಳ ಸುರಿಮಳೆಯೇ ಬರ್ತಿದೆ. ಇವರ ಜೊತೆಗೆ ಮಹಿಮಾ ನಂಬಿಯಾರ್, ಹಿರಿಯ ನಟ ಸತ್ಯರಾಜ್, ಕ್ರಿಶ್ ಹಾಸನ್, ಮಿಥುನ್ ಜೈ ಶಂಕರ್, ರವೀಂದ್ರ ವಿಜಯ್ ಹಾಗೂ ಬಾಲ ಸರವಣನ್ ಎಲ್ಲರೂ ತಮ್ಮ ಪಾತ್ರಕ್ಕೆ ಸರಿಯಾಗಿ ನ್ಯಾಯ ಒದಗಿಸಿದ್ದಾರೆ.
ಈ ಚಿತ್ರಕ್ಕೆ ಮತಿಮಾರನ್ ಕಥೆ ಬರೆದು ನಿರ್ದೇಶನ ಮಾಡಿದ್ದು, ಅವರ ಜೊತೆ ಅಮೀರ್ ಜಮಾಲ್ ಖಾನ್, ಆರ್. ಮೋಹನ ವಸಂತನ್ ಹಾಗೂ ತಿರಲ್ ಶಂಕರ್ ಸಂಭಾಷಣೆ ಮತ್ತು ಚಿತ್ರಕಥೆಯಲ್ಲಿ ಸಾಥ್ ನೀಡಿದ್ದಾರೆ. ಜಿ.ವಿ. ಪ್ರಕಾಶ್ ಕುಮಾರ್ ಅವರ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಸಿನಿಮಾಗೆ ದೊಡ್ಡ ಪ್ಲಸ್ ಪಾಯಿಂಟ್ ಆದ್ರೆ, ಎಸ್.ಆರ್. ಕತಿರ್ ಅವರ ಛಾಯಾಗ್ರಹಣ ಮತ್ತು ಪ್ರದೀಪ್ ಇ. ರಾಗವ್ ಅವರ ಶಾರ್ಪ್ ಎಡಿಟಿಂಗ್ ಸಿನಿಮಾವನ್ನು ಮತ್ತೊಂದು ಲೆವೆಲ್‌ಗೆ ತೆಗೆದುಕೊಂಡು ಹೋಗಿದೆ.
ಒಟ್ಟಿನಲ್ಲಿ, ‘ಮಂಡಾಡಿ’ ಸಿನಿಮಾ ಮಾಸ್ ಮತ್ತು ಕ್ಲಾಸ್ ಎರಡೂ ವರ್ಗದ ಪ್ರೇಕ್ಷಕರನ್ನು ಕವರ್ ಮಾಡಿಕೊಂಡಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ದೊಡ್ಡ ಮೊತ್ತದ ಕಲೆಕ್ಷನ್ ಮಾಡೋದು ಗ್ಯಾರಂಟಿ.



