January19, 2026
Monday, January 19, 2026
spot_img

CINE | ತ್ರಿಮೂರ್ತಿಗಳ ಅಬ್ಬರಕ್ಕೆ ಬಾಕ್ಸ್ ಆಫೀಸ್ ಧೂಳಿಪಟ: ’45’ ಸಿನಿಮಾಗೆ ಕರುನಾಡು ಫಿದಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವರ್ಷದ ಕೊನೆಯಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಬಿರುಗಾಳಿ ಎದ್ದಿದೆ! ಬಹುನಿರೀಕ್ಷಿತ ಚಿತ್ರ ’45’ ಇಂದು ಅದ್ಧೂರಿಯಾಗಿ ರಾಜ್ಯಾದ್ಯಂತ ತೆರೆಕಂಡಿದ್ದು, ಮೊದಲ ಪ್ರದರ್ಶನದಿಂದಲೇ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

ಸಂಗೀತ ಲೋಕದಲ್ಲಿ ಮೋಡಿ ಮಾಡಿದ್ದ ಅರ್ಜುನ್ ಜನ್ಯ, ಈ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ. ಮೊದಲ ಪ್ರಯತ್ನದಲ್ಲೇ ಮೂವರು ಬಲಿಷ್ಠ ನಟರನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಅವರು ಯಶಸ್ವಿಯಾಗಿದ್ದು, ಪ್ರೇಕ್ಷಕರಿಂದ ಸೈ ಎನಿಸಿಕೊಂಡಿದ್ದಾರೆ. ಚಿತ್ರದ ವಿನೂತನ ಕಥೆ ಮತ್ತು ನಿರೂಪಣೆ ಪ್ರೇಕ್ಷಕರಿಗೆ ಹೊಸ ಅನುಭವ ನೀಡುತ್ತಿದೆ.

ನಗರದ ತ್ರಿವೇಣಿ ಚಿತ್ರಮಂದಿರ ಸೇರಿದಂತೆ ರಾಜ್ಯದ ಮೂಲೆ ಮೂಲೆಯ ಚಿತ್ರಮಂದಿರಗಳಲ್ಲಿ ಹಬ್ಬದ ವಾತಾವರಣ ಮನೆಮಾಡಿದೆ. ಸ್ವತಃ ಶಿವರಾಜ್ ಕುಮಾರ್ ಅವರು ಪತ್ನಿ ಗೀತಾ ಶಿವರಾಜ್ ಕುಮಾರ್ ಹಾಗೂ ಚಿತ್ರತಂಡದೊಂದಿಗೆ ಆಗಮಿಸಿ ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಿದ್ದು ವಿಶೇಷವಾಗಿತ್ತು. ಶಿವಣ್ಣನ ಎನರ್ಜಿ, ಉಪೇಂದ್ರ ಅವರ ವಿಭಿನ್ನ ಶೈಲಿ ಹಾಗೂ ರಾಜ್ ಬಿ ಶೆಟ್ಟಿಯವರ ನೈಸರ್ಗಿಕ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ರಮೇಶ್ ರೆಡ್ಡಿ ಅವರ ನಿರ್ಮಾಣದ ಈ ಚಿತ್ರ 2025ರ ವರ್ಷಾಂತ್ಯಕ್ಕೆ ಕನ್ನಡ ಚಿತ್ರರಂಗಕ್ಕೆ ದೊಡ್ಡ ಬೂಸ್ಟ್ ನೀಡಿದೆ. ಟ್ರೈಲರ್ ಸೃಷ್ಟಿಸಿದ್ದ ಕುತೂಹಲಕ್ಕೆ ನ್ಯಾಯ ಒದಗಿಸಿರುವ ’45’, ಮೊದಲ ದಿನವೇ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡುವ ಮುನ್ಸೂಚನೆ ನೀಡಿದೆ. ಕನ್ನಡಿಗರ ಪ್ರೀತಿಯನ್ನು ಬಾಚಿಕೊಳ್ಳುತ್ತಿರುವ ಈ ಸಿನಿಮಾ, ಹೊಸ ವರ್ಷದ ಸ್ವಾಗತಕ್ಕೆ ಸಜ್ಜಾಗಿರುವ ಸಿನಿಮಾ ಪ್ರಿಯರಿಗೆ ಸಖತ್ ಗಿಫ್ಟ್ ಆಗಿದೆ.

Must Read