ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಹುಬಲಿ ಖ್ಯಾತಿಯ ನಿರ್ದೇಶಕ ಎಸ್.ಎಸ್. ರಾಜಮೌಳಿ ಮತ್ತು ಸೂಪರ್‌ಸ್ಟಾರ್ ಮಹೇಶ್ ಬಾಬು ಕಾಂಬಿನೇಷನ್‌ನ ಬಹುನಿರೀಕ್ಷಿತ ಚಿತ್ರಕ್ಕೆ ಇತ್ತೀಚೆಗೆ ‘ವಾರಣಾಸಿ’ ಎಂದು ಶೀರ್ಷಿಕೆ ಘೋಷಿಸಲಾಗಿತ್ತು. ಅದ್ದೂರಿಯಾಗಿ ನಡೆದ ಟೈಟಲ್ ಲಾಂಚ್ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದು ದೃಢಪಟ್ಟಿತ್ತು. ಆದರೆ, ಈ ವಿಜೃಂಭಣೆಯ ಘೋಷಣೆಯ ಬೆನ್ನಲ್ಲೇ ಇದೀಗ ಸಿನಿಮಾದ ಶೀರ್ಷಿಕೆ ಕುರಿತು ದೊಡ್ಡ ವಿವಾದ ಭುಗಿಲೆದ್ದಿದೆ.
ಟೈಟಲ್ ನಮ್ಮದು ಎಂದ ಸಿಎಚ್ ಸುಬ್ಬಾ ರೆಡ್ಡಿ:
ಹೈದರಾಬಾದ್‌ನ ‘ರಾಮ ಬ್ರಹ್ಮ ಹನುಮ ಕ್ರಿಯೇಷನ್ಸ್’ ಸಂಸ್ಥೆಯನ್ನು ನಡೆಸುತ್ತಿರುವ ನಿರ್ಮಾಪಕ ಸಿಎಚ್ ಸುಬ್ಬಾ ರೆಡ್ಡಿ ಅವರು ಈ ‘ವಾರಣಾಸಿ’ ಟೈಟಲ್ ಹಕ್ಕು ತಮ್ಮದೆಂದು ಹೇಳಿಕೊಂಡಿದ್ದಾರೆ. ಅವರು 2023ರಲ್ಲೇ ‘ತೆಲುಗು ಸಿನಿಮಾ ನಿರ್ಮಾಪಕರ ಮಂಡಳಿ’ಯಲ್ಲಿ ಟೈಟಲ್ ನೋಂದಣಿ ಮಾಡಿಸಿದ್ದು, ಜೂನ್‌ನಲ್ಲಿ ಅದನ್ನು ಮರು ನೋಂದಣಿ ಮಾಡಿಸಿ 2026ರವರೆಗೂ ಬಳಕೆಯ ಹಕ್ಕು ಪಡೆದಿದ್ದಾರೆ.
ಸ್ಪೆಲ್ಲಿಂಗ್‌ನಲ್ಲಿ ವ್ಯತ್ಯಾಸ, ಸಮಸ್ಯೆಯ ಮೂಲ! ವಿವಾದಕ್ಕೆ ಮುಖ್ಯ ಕಾರಣ ಶೀರ್ಷಿಕೆಯ ಉಚ್ಚಾರಣೆ ಒಂದೇ ರೀತಿ ಇದ್ದರೂ, ಇಂಗ್ಲಿಷ್‌ನಲ್ಲಿನ ಕಾಗುಣಿತದ ವ್ಯತ್ಯಾಸ. ಸುಬ್ಬಾ ರೆಡ್ಡಿ ಅವರು ‘Vaaranasi’ ಎಂದು ನೋಂದಣಿ ಮಾಡಿದ್ದರೆ, ರಾಜಮೌಳಿ ಅವರ ತಂಡ ‘Varanasi’ ಎಂದು ನೋಂದಾಯಿಸಿದೆ. ಕೇವಲ ಒಂದು ಅಕ್ಷರದ ವ್ಯತ್ಯಾಸ ಈ ಕಾನೂನಾತ್ಮಕ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಸೌಹಾರ್ದಯುತ ಇತ್ಯರ್ಥಕ್ಕೆ ವಿಶ್ವಾಸ:
ಈ ವಿವಾದ ಕುರಿತು ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭರತ್ ಭೂಷಣ್ ಅವರು ಸೌಹಾರ್ದಯುತ ಇತ್ಯರ್ಥದ ಭರವಸೆ ವ್ಯಕ್ತಪಡಿಸಿದ್ದಾರೆ. “ಚರ್ಚೆಗಳು ನಡೆಯುತ್ತಿವೆ. ಈ ಸಮಸ್ಯೆ ಸುಗಮವಾಗಿ ಬಗೆಹರಿಯಲಿದೆ ಎಂಬ ವಿಶ್ವಾಸ ನಮಗಿದೆ,” ಎಂದು ಅವರು ತಿಳಿಸಿದ್ದಾರೆ.
₹27 ಕೋಟಿ ವೆಚ್ಚದ ಭಾರಿ ನಷ್ಟದ ಭೀತಿ:
ಒಂದು ವೇಳೆ ರಾಜಮೌಳಿ ಅವರು ಸಿನಿಮಾದ ಟೈಟಲ್ ಬದಲಾಯಿಸಬೇಕಾದ ಅನಿವಾರ್ಯತೆ ಎದುರಾದರೆ, ದೊಡ್ಡ ಮೊತ್ತದ ಹಣ ವ್ಯರ್ಥವಾಗುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ, ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆದ ಅದ್ದೂರಿ ಟೈಟಲ್ ಲಾಂಚ್ ಈವೆಂಟ್‌ಗೆ ಬರೋಬ್ಬರಿ ₹27 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಟೈಟಲ್ ಬದಲಾವಣೆಯಾದರೆ ಇಷ್ಟು ದೊಡ್ಡ ಮೊತ್ತದ ಹೂಡಿಕೆ ವ್ಯರ್ಥವಾಗಿ, ರಾಜಮೌಳಿ ಅವರ ತಂಡಕ್ಕೆ ಇದು ಗಂಭೀರ ಹಿನ್ನಡೆ ಉಂಟುಮಾಡಲಿದೆ. ಈ ಪರಿಸ್ಥಿತಿ ಎದುರಾಗದಿರಲಿ ಎಂದು ಅಭಿಮಾನಿಗಳು ಕೋರಿಕೊಂಡಿದ್ದಾರೆ.

