May 11, 2026
Monday, May 11, 2026
spot_img

CINE | ತಮಿಳುನಾಡಿನಲ್ಲಿ ವಿಜಯ್ ಪರ್ವ ಆರಂಭ: ಮಾಸ್ ವಿಜಯೋತ್ಸವಕ್ಕೆ ಸಜ್ಜಾದ ‘ಜನನಾಯಗನ್’!

ಹೊಸದಿಗಂತ ಡಿಜಿಟಲ್ ಡೆಸ್ಕ್:

`ಸಿ ಜೋಸೆಫ್ ವಿಜಯ್ ಎಂಬ ನಾನು’ ಎಂದು ಪ್ರಮಾಣ ವಚನ ಸ್ವೀಕರಿಸುವ ಮೂಲಕ ವಿಜಯ್ ತಮಿಳುನಾಡಿನ 9ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ತಮ್ಮ ತಮಿಳಗ ವೆಟ್ರಿ ಕಳಗಂ ಪಕ್ಷದ ಮೂಲಕ ಭರ್ಜರಿ ಜಯ ಸಾಧಿಸಿರುವ ಅವರು, ಶೀಘ್ರದಲ್ಲೇ ಜನರ ಸೇವೆಗೆ ಅಧಿಕೃತವಾಗಿ ಕಾರ್ಯಪ್ರವೃತ್ತರಾಗಿದ್ದಾರೆ.

ಸಿನಿಮಾ ಜೀವನಕ್ಕೆ ವಿದಾಯ ಹೇಳಿ ರಾಜಕೀಯಕ್ಕೆ ಧುಮುಕಿರುವ ವಿಜಯ್ ಅವರ ಕಟ್ಟಕಡೆಯ ಸಿನಿಮಾ ‘ಜನನಾಯಗನ್’. ಇದು ಕನ್ನಡ ಮೂಲದ ಹೆಸರಾಂತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಅಡಿಯಲ್ಲಿ ಮೂಡಿಬಂದಿರುವ ಬೃಹತ್ ಬಜೆಟ್ ಚಿತ್ರವಾಗಿದೆ.

ಈ ಚಿತ್ರವು ಜನವರಿ 9ರಂದೇ ಬಿಡುಗಡೆಯಾಗಬೇಕಿತ್ತು. ಆದರೆ ಚಿತ್ರದ ಕಥಾಹಂದರವು ವಿಜಯ್ ಅವರಿಗೆ ರಾಜಕೀಯ ಮೈಲೇಜ್ ನೀಡಬಹುದು ಎಂಬ ಕಾರಣಕ್ಕೆ ಹಿಂದಿನ ಸರ್ಕಾರ ಹಾಗೂ ಸೆನ್ಸಾರ್ ಮಂಡಳಿಯಿಂದ ಅಡೆತಡೆಗಳು ಎದುರಾಗಿದ್ದವು ಎಂದು ಹೇಳಲಾಗಿತ್ತು. ಆದರೆ ಈಗ ತಮಿಳುನಾಡಿನಲ್ಲಿ ವಿಜಯ್ ಅವರದ್ದೇ ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದರಿಂದ, ಚಿತ್ರದ ಸೆನ್ಸಾರ್ ಹಾಗೂ ಬಿಡುಗಡೆಗೆ ಇದ್ದ ಎಲ್ಲ ಹಾದಿಗಳು ಸುಗಮವಾಗಿವೆ.

ಒಂದೆಡೆ ತಮ್ಮ ನೆಚ್ಚಿನ ನಟ ನಾಡಿನ ಮುಖ್ಯಮಂತ್ರಿಯಾಗಿರುವುದು, ಇನ್ನೊಂದೆಡೆ ಅವರ ಮಾಸ್ ಚಿತ್ರ ‘ಜನನಾಯಗನ್’ ತೆರೆಗೆ ಬರಲು ಸಜ್ಜಾಗಿರುವುದು ಅಭಿಮಾನಿಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ. ಜೂನ್ ತಿಂಗಳಲ್ಲಿ ವಿಜಯ್ ಅವರ ಜನ್ಮದಿನದಂದು ಈ ಚಿತ್ರ ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುವ ಸಾಧ್ಯತೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !