Friday, December 8, 2023

Latest Posts

ಸಿನಿಮಾ ಜಗತ್ತಲ್ಲಿ ಹಳೆ ಹುಲಿಗಳನ್ನು ನೇಪಥ್ಯದ ಆತಂಕಕ್ಕೆ ದೂಡುತ್ತಿರುವ ಸಂಗತಿ ಯಾವುದು?

 

ಹೊಸ ದಿಗಂತ ಡಿಜಿಟಲ್ ವಿಶ್ಲೇಷಣೆ

ಇತ್ತೀಚಿನ ಸಿನಿಮಾ ಜಗತ್ತಿನ ಟ್ರೆಂಡ್ ಅಂತ ಯೋಚಿಸುವುದಕ್ಕೆ ಹೋದರೆ, ಕಾಂತಾರದಂಥ ಚಿತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿರುವ ವಿದ್ಯಮಾನ ಒಂದು ಕಡೆಕಾಣುತ್ತದೆ. ಕೆಲದಿನಗಳ ಹಿಂದೆ ಆದಿ ಪುರುಷ ಎಂಬ ಹಿಂದಿ ಸಿನಿಮಾದ ಟ್ರೈಲರ್ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದು, ಇವರಿಗೆ ಗುಣಮಟ್ಟವೇ ಗೊತ್ತಿಲ್ಲ ಎಂದು ಟೀಕಿಸಿಕೊಂಡಿದ್ದು ಇನ್ನೊಂದು ವಿದ್ಯಮಾನ.

ಉದಾಹರಣೆಗೆ ಅಂತ ಇವೆರಡು ಉಲ್ಲೇಖಗಳಾದರೂ ಒಟ್ಟಾರೆಯಾಗಿ ಇಂದು ಸಿನಿಮಾ ಎಂದರೆ ಕೇವಲ ದಿಗ್ಗಜ ಹೀರೋಗಳು ಮತ್ತು ಅವರು ಕಟ್ಟಿಕೊಂಡ ವಿತರಕ ಜಗತ್ತು ಮಾತ್ರವಲ್ಲ ಎಂಬ ಸ್ಥಿತಿ ಬಂದಿದೆ. ಈಗಲೂ ಯೂಟ್ಯೂಬಿನ ರೀಲುಗಳಲ್ಲಿ ಸೆಲಿಬ್ರಿಟಿ ಮಕ್ಕಳ ನಡಿಗೆಗೆ, ಜಿಮ್ ವರ್ಕ್ ಔಟ್ಗೆ ಕೋಟಿಗಟ್ಟಲೇ ವ್ಯೂಸ್ ಸಿಗುತ್ತಿರಬಹುದಾದರೂ ಅವರ ಚಿತ್ರಗಳನ್ನು ಜನ ಚಿತ್ರಮಂದಿರಕ್ಕೆ ಬಂದು ನೋಡುತ್ತಾರೆ ಎಂಬ ಸ್ಥಿತಿ ಇಲ್ಲ.

ಇವಕ್ಕೆಲ್ಲ ಹಳಬರಲ್ಲಿ ಹಲವರ ಏಕತಾನತೆ, ಹೊಸತನವಿಲ್ಲದ ಸ್ಥಿತಿ ಎಂದೆಲ್ಲ ಮೇಲ್ನೋಟದ ವಿಶ್ಲೇಷಣೆ ಮಾಡಬಹುದು. ಆದರೆ ಅದಷ್ಟೇ ನಿಜವಲ್ಲ. ಏಕೆಂದರೆ, ಕೇವಲ ಇವರ ದೌರ್ಬಲ್ಯಗಳು ಮಾತ್ರವೇ ಆಗಿದ್ದರೆ ಮತ್ತೇನೂ ಪರ್ಯಾಯಗಳಿಲ್ಲದ ಸ್ಥಿತಿಯಲ್ಲಿ ಅವವೇ ಮಚ್ಚು-ಲಾಂಗುಗಳ ಹೀರೋಗಿರಿ, ದ್ವಂದಾರ್ಥ ಸಂಭಾಷಣೆಗಳೇ ಜೀವಾಳವಾಗಿರುವ ಚಿತ್ರಗಳು ಗೆದ್ದುಕೊಂಡಿರುತ್ತಿದ್ದವು.

ಆದರೆ, ಈಗ ಆಗಿರುವ ಬದಲಾವಣೆ ಸಂಪರ್ಕ ಮಾಧ್ಯಮದ್ದು ಹಾಗೂ ಆ ಮೂಲಕ ವಿತರಕ ವ್ಯವಸ್ಥೆ ಸಹ ಬಿಸಿ ತಟ್ಟಿಸಿಕೊಂಡಿರುವಂಥದ್ದು.

ಹಿಂಸೆ-ಕಾಮ ಇತ್ಯಾದಿ ಭಾವನೆಗಳೇನೂ ಕಡಿಮೆಯಾಗಿವೆ ಎಂದೇನಿಲ್ಲ. ಆದರೆ, ಮೊಬೈಲ್ ಫೋನೇ ಸ್ಕ್ರೀನ್ ಆಗಿರುವ ಹಂತದಲ್ಲಿ ಅವೆಲ್ಲದರ ಹಸಿವು ನೀಗಿಸಿಕೊಳ್ಳುವುದಕ್ಕೆ ಥಿಯೇಟರ್ ವರೆಗೆ ಹೋಗಬೇಕಾದ ಅಗತ್ಯವಿಲ್ಲ. ಹೀಗಾಗಿ ಸಿನಿಮಾ ಮಂದಿರಕ್ಕೆ ಕರೆಸಿಕೊಳ್ಳುವುದಕ್ಕೆ ಹೊಸ ಕತೆಗಳೇ ಆಗಬೇಕು ಮತ್ತು ಚಿತ್ರ ನಿರ್ಮಾತೃರು ಇದಕ್ಕಾಗಿ ಪ್ರಯತ್ನ ಹಾಕಲೇಬೇಕು ಎಂಬ ಸ್ಥಿತಿ ಬಂದಿದೆ.

ಇದೇ ವೇಳೆಗೆ, ಸಿನಿಮಾ ನಿರ್ಮಿಸುವವ ಇನ್ಯಾವುದೋ ಜಗತ್ತು ಸೃಷ್ಟಿಸುತ್ತಾನೆ ಎಂದಾದರೂ ಅದರ ವಿನ್ಯಾಸ, ಗ್ರಾಫಿಕ್ಸ್ ಎಲ್ಲವೂ ವಿಶ್ವದರ್ಜೆಯದ್ದಾಗಿರಬೇಕು. ಏಕೆಂದರೆ ದಶಕದ ಹಿಂದೆ ಕೆಲವರು ಮಾತ್ರವೇ ಉನ್ನತ ತಾಂತ್ರಿಕತೆಯ ವಿದೇಶಿ ಚಿತ್ರಗಳನ್ನು ನೋಡಿರುತ್ತಿದ್ದರು. ಆದರೀಗ, ಮೊಬೈಲ್ ಫೋನ್ ಸ್ಕ್ರೀನಿನಲ್ಲಿ ಬಹುತೇಕ ಸಿನಿಮಾ ಪ್ರಿಯರಿಗೆ ಆ ತಾಂತ್ರಿಕ ಅನುಭವದ ಪರಿಚಯವಾಗಿದೆ. ಆದಿ ಪುರುಷ ಟ್ರೈಲರಿನಲ್ಲಿ ಕಳಪೆ ಕಂಪ್ಯೂಟರ್ ಗ್ರಾಫಿಕ್ಸ್ ಮಾಡಲಾಗಿದೆ ಅಂತ ಸಾಮಾನ್ಯರೂ ಪ್ರತಿಕ್ರಿಯಿಸುತ್ತಿರುವುದು ಇದೇ ಹಿನ್ನೆಲೆಯಲ್ಲಿ.

ಹೀಗಾಗಿ ಇವತ್ತು ಸಿನಿಮಾ ಮಂದಿರಗಳ ವಿತರಕ ವ್ಯವಸ್ಥೆ, ಹಣಬಲ, ಪ್ರಚಾರಬಲ ಇದ್ದ ಮಾತ್ರಕ್ಕಷ್ಟೇ ಒಂದಿಷ್ಟು ಮಂದಿ ತೆರೆಯನ್ನಾಳಿಬಿಡಬಹುದೆಂಬ ಸ್ಥಿತಿ ಇಲ್ಲವಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!