August 10, 2026
Monday, August 10, 2026
spot_img

ಸಿನಿಮೀಯ ಶೈಲಿಯಲ್ಲಿ ಲಾರಿ ಚೇಸ್: ಕಸಾಯಿಖಾನೆಗೆ ಸಾಗಿಸುತ್ತಿದ್ದ ಮೂರು ಹೋರಿಗಳ ರಕ್ಷಣೆ!

ಹೊಸದಿಗಂತ ಯಲ್ಲಾಪುರ:

ತಾಲೂಕಿನ ಗುಳ್ಳಾಪುರದ ಬಳಿ ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸಲಾಗುತ್ತಿದ್ದ ಮೂರು ದಷ್ಟಪುಷ್ಟ ಹೋರಿಗಳನ್ನು ಗೋಪ್ರೇಮಿಗಳು ಶನಿವಾರ ರಕ್ಷಿಸಿದ್ದಾರೆ. ಮಹಾರಾಷ್ಟ್ರ ನೋಂದಣಿಯ ಲಾರಿಯಲ್ಲಿ ಈ ಹೋರಿಗಳನ್ನು ಅತ್ಯಂತ ಅಮಾನವೀಯವಾಗಿ ಸಾಗಾಟ ಮಾಡಲಾಗುತ್ತಿತ್ತು.

ಅಕ್ರಮ ಸಾಗಾಟದ ಖಚಿತ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಗೋಭಕ್ತ ಸಂಜಯ್ ಪಿಳ್ಳೈ ಹಾಗೂ ಅವರ ತಂಡ, ಲಾರಿಯನ್ನು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿಯುವಲ್ಲಿ ಯಶಸ್ವಿಯಾದರು. ತಕ್ಷಣವೇ ರಕ್ಷಿಸಿದ ಹೋರಿಗಳನ್ನು ಪೊಲೀಸರ ಸುಪರ್ದಿಗೆ ಒಪ್ಪಿಸಲಾಗಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಹರಿಪ್ರಕಾಶ ಕೋಣೆಮನೆ ಹಾಗೂ ಪ್ರಸಾದ್ ಹೆಗಡೆ ಅವರು ಗೋಪ್ರೇಮಿಗಳೊಂದಿಗೆ ಪೊಲೀಸ್ ಠಾಣೆಗೆ ಭೇಟಿ ನೀಡಿದರು. ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಅವರು, ಗೋಹಂತಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಮತ್ತು ತಾಲೂಕಿನಲ್ಲಿ ಗೋಹತ್ಯೆ ತಡೆಯಲು ಬಿಗಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಪಿಎಸ್ ಐ ರಾಜಶೇಖರ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ, ಗೋವುಗಳ ಸಂರಕ್ಷಣೆಯ ಭರವಸೆ ನೀಡಿದ್ದಾರೆ. ಸದ್ಯ ರಕ್ಷಿಸಲಾದ ಮೂರು ಹೋರಿಗಳನ್ನು ಸ್ವರ್ಣವಲ್ಲಿ ಮಠದ ಆಶ್ರಯದಲ್ಲಿರುವ ಕರಡೊಳ್ಳಿ ಗೋಶಾಲೆಗೆ ಕಳುಹಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !