ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಲಷ್ಕರ್-ಎ-ತೊಯ್ಬಾ ಸಂಘಟನೆಯ ಹಿರಿಯ ಕಮಾಂಡರ್ ಖಾರಿ ಸಯೀದ್ ಅಬ್ದುಲ್ ಅಜೀಜ್ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾನೆ.
ಇಂದು ಈ ಘಟನೆ ನಡೆದಿದ್ದು, ರೆಸ್ಟೋರೆಂಟ್‌ನಲ್ಲಿ ಊಟ ಮಾಡಿದ ಬಳಿಕ ಆತ ಇಸ್ಲಾಮಾಬಾದ್‌ನ ಕ್ಯೂಬಾ ಮಸೀದಿಗೆ ಪ್ರಾರ್ಥನೆ ಸಲ್ಲಿಸಲು ತೆರಳಿದ್ದ. ಈ ವೇಳೆ ಮಸೀದಿಯ ಗೇಟ್ ಬಳಿ ಇದ್ದಕ್ಕಿದ್ದಂತೆ ಕುಸಿದುಬಿದ್ದು ಆತ ಸಾವನ್ನಪ್ಪಿದ್ದಾನೆ. ಸಾವಿಗೆ ನಿಖರ ಕಾರಣ ತಕ್ಷಣಕ್ಕೆ ಬಹಿರಂಗವಾಗಿಲ್ಲ.
ಅಪರಿಚಿತ ರೆಸ್ಟೋರೆಂಟ್‌ನಲ್ಲಿ ಊಟ
ಅಲ್ಲಿನ ಮಾಧ್ಯಮಗಳ ವರದಿ ಪ್ರಕಾರ, ಮಸೀದಿಗೆ ತೆರಳುವ ಮೊದಲು ಅಬ್ದುಲ್ ಅಜೀಜ್, ತನಗೆ ಪರಿಚಯವಿಲ್ಲದ ರೆಸ್ಟೋರೆಂಟ್‌ನಲ್ಲಿ ಆಹಾರ ಸೇವಿಸಿದ್ದ. ನಂತರ ಮಸೀದಿಗೆ ತೆರಳಿದ್ದ. ಕೆಲವೇ ಗಂಟೆಗಳಲ್ಲಿ ಮಸೀದಿಯ ಪ್ರವೇಶದ್ವಾರದ ಬಳಿ ಕುಸಿದುಬಿದ್ದು ಸಾವು ಸಂಭವಿಸಿದೆ. ಆಹಾರ ಸೇವನೆಗೂ ಸಾವಿಗೂ ನೇರ ಸಂಬಂಧವಿದೆ ಎಂದು ಯಾವುದೇ ಅಧಿಕೃತ ತನಿಖಾ ವರದಿ ದೃಢಪಡಿಸಿಲ್ಲ. ವಿಷಪ್ರಯೋಗ ಅಥವಾ ಇತರ ಯಾವುದೇ ಕಾರಣದ ಬಗ್ಗೆಯೂ ಸದ್ಯ ಅಧಿಕೃತ ವರ್ದಿ ಬಂದಿಲ್ಲ.
ಯಾರು ಈ ಖಾರಿ ಸಯೀದ್ ಅಬ್ದುಲ್ ಅಜೀಜ್?
ಅಬ್ದುಲ್ ಅಜೀಜ್ ಲಷ್ಕರ್-ಎ-ತೊಯ್ಬಾದ ಹಿರಿಯ ಕಮಾಂಡರ್ ಆಗಿದ್ದ. ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಎನ್‌ಕೌಂಟರ್‌ಗಳಲ್ಲಿ ಮೃತಪಟ್ಟ ಭಯೋತ್ಪಾದಕರ ಕುಟುಂಬಗಳಿಗೆ ನೆರವು ನೀಡುವ ಸಂಘಟನೆಯ ವಿಭಾಗದ ಜವಾಬ್ದಾರಿಯನ್ನು ಅವರು ಹೊಂದಿದ್ದ ಎಂದು ವರದಿ ಹೇಳಿದೆ. ಲಷ್ಕರ್-ಎ-ತೊಯ್ಬಾ ಭಾರತದಲ್ಲಿ ನಡೆದ ಹಲವು ಭಯೋತ್ಪಾದಕ ದಾಳಿಗಳೊಂದಿಗೆ ಸಂಬಂಧ ಹೊಂದಿರುವ ಸಂಘಟನೆಯಾಗಿದೆ. 2008ರ ಮುಂಬೈ ಭಯೋತ್ಪಾದಕ ದಾಳಿಗೂ ಈ ಸಂಘಟನೆಯ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು.
ಇದನ್ನೂ ಓದಿ:
ಆರೋಪಗಳ ನಡುವೆಯೇ ಮತ್ತೊಂದು ‘ಅಪರಿಚಿತ’ ಸಾವು!
ಅಬ್ದುಲ್ ಅಜೀಜ್ ಸಾವು ಲಷ್ಕರ್ ಸದಸ್ಯರ ವಿರುದ್ಧ ನಡೆಯುತ್ತಿದೆ ಎನ್ನಲಾದ ಸರಣಿ ದಾಳಿಗಳ ಕುರಿತ ಚರ್ಚೆಯ ನಡುವೆಯೇ ನಡೆದಿದೆ. ಇತ್ತೀಚೆಗೆ ಲಷ್ಕರ್‌ಗೆ ಸಂಬಂಧಿಸಿದ ವ್ಯಕ್ತಿ ವಿಡಿಯೊದಲ್ಲಿ, ಕಳೆದ ಮೂರು-ನಾಲ್ಕು ವರ್ಷಗಳಲ್ಲಿ ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ ಸಂಘಟನೆಯ 30ಕ್ಕೂ ಹೆಚ್ಚು ಸದಸ್ಯರನ್ನು ‘ಅಪರಿಚಿತ ವ್ಯಕ್ತಿಗಳು’ ಕೊಂದಿದ್ದಾರೆ ಎಂದು ಹೇಳಿಕೊಂಡಿದ್ದ. ಪೇಶಾವರ್, ಕರಾಚಿ, ರಾವಲ್ಪಿಂಡಿ, ರಾವಲಕೋಟ್ ಮತ್ತು ಮುಜಫರಾಬಾದ್ ಸೇರಿದಂತೆ ಹಲವು ಸ್ಥಳಗಳ ಹೆಸರುಗಳನ್ನು ಆತ ಉಲ್ಲೇಖಿಸಿದ್ದ. ಆದರೆ ಈ ಸರಣಿ ಘಟನೆಗಳು ಮತ್ತು ಅಬ್ದುಲ್ ಅಜೀಜ್ ಸಾವಿನ ನಡುವೆ ಸಂಬಂಧವಿದೆ ಎಂಬುದು ಮಾತ್ರ ದೃಢಪಟ್ಟಿಲ್ಲ.



