ಹೊಸದಿಗಂತ ಡಿಜಿಟಲ್ ಡೆಸ್ಕ್:
ಗ್ಲ್ಯಾಸ್ಗೋದಲ್ಲಿ ನಡೆದ 2026ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿ, ಪದಕಗಳ ಬೇಟೆಯಾಡಿ ತಾಯ್ನಾಡಿಗೆ ಮರಳಿದ ಭಾರತೀಯ ಕ್ರೀಡಾಪಟುಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಿವಾಸದಲ್ಲಿ ಭೇಟಿಯಾಗಿ ಅಭಿನಂದಿಸಿದರು. ಕ್ರೀಡಾಪಟುಗಳ ಅಪ್ರತಿಮ ಪ್ರದರ್ಶನವನ್ನು ಮುಕ್ತಕಂಠದಿಂದ ಶ್ಲಾಘಿಸಿದ ಪ್ರಧಾನಿ, ಪ್ರತಿಯೊಬ್ಬ ಸಾಧಕನೂ ದೇಶ ಹೆಮ್ಮೆಪಡುವಂತೆ ಮಾಡಿದ್ದಾನೆ ಮತ್ತು ಇವರ ಯಶಸ್ಸು ಭಾರತೀಯ ಕ್ರೀಡಾ ಲೋಕದ ಸುವರ್ಣ ಯುಗದ ಆರಂಭಕ್ಕೆ ನಾಂದಿ ಹಾಡಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯುವಜನತೆಗೆ ಇವರೇ ಸ್ಫೂರ್ತಿ:
ಕ್ರೀಡಾಪಟುಗಳೊಂದಿಗಿನ ಭೇಟಿಯ ನಂತರ ಪ್ರಧಾನಿ ಮೋದಿ ಅವರು ‘X’ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡು, “7, ಲೋಕ ಕಲ್ಯಾಣ ಮಾರ್ಗದಲ್ಲಿ ಕಾಮನ್‌ವೆಲ್ತ್ ಗೇಮ್ಸ್ 2026ರ ನಮ್ಮ ಹೆಮ್ಮೆಯ ಪದಕ ವಿಜೇತರನ್ನು ಆತಿಥ್ಯ ನೀಡಿ ಗೌರವಿಸಲು ಅತ್ಯಂತ ಸಂತೋಷವಾಗುತ್ತಿದೆ. ಗೇಮ್ಸ್‌ನಲ್ಲಿ ಅವರ ಅನುಭವಗಳನ್ನು ಆಲಿಸಿದೆ. ಪ್ರತಿಯೊಬ್ಬ ಕ್ರೀಡಾಪಟುವು ತಮ್ಮ ಅಸಾಧಾರಣ ಪ್ರದರ್ಶನದ ಮೂಲಕ ನಮ್ಮ ದೇಶ ಹೆಮ್ಮೆಪಡುವಂತೆ ಮಾಡಿದ್ದಾರೆ. ಇವರ ಯಶಸ್ಸು ದೇಶದ ಲಕ್ಷಾಂತರ ಯುವಕರಿಗೆ ಪ್ರೇರಣೆಯಾಗಲಿದೆ” ಎಂದು ಬರೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಉಪಸ್ಥಿತರಿದ್ದರು.
ಪ್ರಧಾನಿ ಮೋದಿಯ ಸರಳತೆಗೆ ಕ್ರೀಡಾಪಟುಗಳು ಫಿದಾ:
ಮಹಿಳೆಯರ 51 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಬಾಕ್ಸರ್ ಸಾಕ್ಷಿ ಚೌಧರಿ ಪ್ರಧಾನಿ ಭೇಟಿಯ ಬಗ್ಗೆ ಪ್ರತಿಕ್ರಿಯಿಸಿ, “ಗೌರವಾನ್ವಿತ ಪ್ರಧಾನಿ ಅವರು ನಮ್ಮನ್ನು ಸ್ವಾಗತಿಸಿದ ರೀತಿಗೆ ನಮಗೆ ಹೆಮ್ಮೆಯೆನಿಸುತ್ತಿದೆ. ಅವರನ್ನು ಭೇಟಿಯಾಗಿದ್ದು ಅದ್ಭುತ ಅನುಭವ, ಅವರು ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿ” ಎಂದು ಕೊಂಡಾಡಿದ್ದಾರೆ. ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸುವಾಗ ಪ್ರಧಾನಿ, “ಜೋ ಖೇಲೇಗಾ, ವೋ ಖಿಲೇಗಾ (ಯಾರು ಆಡುತ್ತಾರೋ ಅವರು ಅರಳುತ್ತಾರೆ). ಯಾವಾಗಲೂ ಭಾರತಕ್ಕಾಗಿ ಚಿಯರ್ ಮಾಡಿ” ಎಂದು ಉತ್ಸಾಹ ತುಂಬಿದರು.
ಭಾರತಕ್ಕೆ 39 ಪದಕ, ಬಾಕ್ಸಿಂಗ್‌ನಲ್ಲಿ ದಾಖಲೆಯ ಬೇಟೆ:
ಗ್ಲ್ಯಾಸ್ಗೋ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ತಂಡವು 13 ಚಿನ್ನದ ಪದಕಗಳು ಸೇರಿದಂತೆ ಒಟ್ಟು 39 ಪದಕಗಳನ್ನು ಗೆಲ್ಲುವ ಮೂಲಕ ಭರ್ಜರಿ ಯಶಸ್ಸು ದಾಖಲಿಸಿದೆ. ವಿಶೇಷವಾಗಿ ಭಾರತದ ಬಾಕ್ಸಿಂಗ್ ತಂಡವು ದಾಖಲೆಯ 10 ಪದಕಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಚಿನ್ನದ ಪದಕ ಗೆದ್ದ ಭಾರತದ ಏಳು ಬಾಕ್ಸರ್‌ಗಳಲ್ಲಿ ಸಾಕ್ಷಿ ಚೌಧರಿ ಕೂಡ ಒಬ್ಬರಾಗಿದ್ದಾರೆ.



