October 11, 2026
Sunday, October 11, 2026
spot_img

ಬಂಟ್ವಾಳದಲ್ಲಿ ಸಿನಿಮೀಯ ಮಾದರಿ ದರೋಡೆ: ತಲವಾರು ತೋರಿಸಿ 8.35 ಲಕ್ಷ ರೂ. ನಗದು ಲೂಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:‌

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಮುಲ್ಕಾಜೆ ಮಾಡದಲ್ಲಿ ಹಾಡಹಗಲೇ ಬೈಕ್ ಸವಾರರೋರ್ವರನ್ನು ಅಡ್ಡಗಟ್ಟಿದ ಎರಡು ಬೈಕ್‌ನಲ್ಲಿ ಬಂದ ನಾಲ್ವರು ಅಪರಿಚಿತರು, ತಲವಾರು ತೋರಿಸಿ 8.35 ಲಕ್ಷ ರೂ. ನಗದು ಹಣವನ್ನು ಸುಲಿಗೆಗೈದು ಪರಾರಿಯಾದ ಘಟನೆ ಗುರುವಾರ ನಡೆದಿದ್ದು, ಸ್ಥಳೀಯವಾಗಿ ಅತಂಕವನ್ನುಂಟು ಮಾಡಿದೆ.

ಮಂಗಳೂರಿನ ಕಣ್ಣೂರು ಎಂಬಲ್ಲಿ ಸಿಮೆಂಟ್ ಹಾಗೂ ಕಬ್ಬಿಣ ಮಾರಾಟದ ಹೋಲ್ ಸೇಲ್ ಸಂಸ್ಥೆಯೊಂದರ ಉದ್ಯೋಗಿ, ಸುರತ್ಕಲ್‌ನ ಚೊಕ್ಕಬೆಟ್ಟು ನಿವಾಸಿ, ಕಳೆದ 27ವರ್ಷಗಳಿಂದ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಯ್ಯದಿ (61) ಎಂಬವರು, ವಿವಿಧ ಅಂಗಡಿಗಳಿಗೆ ಹಾಕಿದ್ದ ಸಿಮೆಂಟ್, ಕಬ್ಬಿಣದ ನಗದು ಹಣವನ್ನು ಸಂಗ್ರಹಿಸಿ, ಮಧ್ಯಾಹ್ನ ಸುಮಾರು 1 ಗಂಟೆಯ ಹೊತ್ತಿಗೆ ಕಕ್ಕೆಪದವಿನಿಂದ ಬಂಟ್ವಾಳದತ್ತ ಬೈಕ್‌ನಲ್ಲಿ ತೆರಳುತ್ತಿದ್ದಾಗ ಇವರನ್ನು ಎರಡು ಬೈಕಿನಲ್ಲಿ ಹಿಂಬಾಲಿಸಿಕೊಂಡು ಬಂದ ನಾಲ್ವರು ಮಣಿನಾಲ್ಕೂರು ಗ್ರಾಮದ ಮುಲ್ಕಾಜೆಮಾಡ ಜಂಕ್ಷನ್ ದಾಟಿ ನಿರ್ಜನ ಪ್ರದೇಶದ ತಿರುವಿನಲ್ಲಿ ತಡೆದು ನಿಲ್ಲಿಸಿ ಈ ಕೃತ್ಯ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಸಂದರ್ಭ ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ಅಪರಿಚಿತರು ಮಯ್ಯದಿ ಅವರನ್ನು ಏಕಾಏಕಿ ಅಡ್ಡಗಟ್ಟಿ ತಲವಾರು ತೋರಿಸಿ ಬೆದರಿಕೆ ಒಡ್ಡಿ ಅವರಲ್ಲಿದ್ದ ಬ್ಯಾಗ್ ನಿಂದ 8.35 ಲಕ್ಷ ರೂ.ವನ್ನು ಸುಲಿಗೆಗೈದು ಪರಾರಿಯಾಗಿದ್ದಾರೆ. ಬಂಟ್ವಾಳ, ವಾಮದಪದವು, ಮಡಂತ್ಯಾರು, ಗುರುವಾಯನಕೆರೆ, ಬೆಳ್ತಂಗಡಿ, ಉಜಿರೆ, ಚಾರ್ಮಾಡಿ, ಕಕ್ಕೆಪದವು ಮೊದಲಾದೆಡೆಯ ಅಂಗಡಿಗಳಿಗೆ ಸಂಸ್ಥೆಯಿಂದ ಹೋಲ್ ಸೇಲ್ ಆಗಿ ಕಳಿಸಿಕೊಡಲಾಗುವ ಸಿಮೆಂಟ್, ಕಬ್ಬಿಣದ ಹಣವನ್ನು ಪ್ರತೀ ಗುರುವಾರದಂದು ಎಲ್ಲಾ ಅಂಗಡಿಗಳಿಗೆ ಹೋಗಿ ಹಣವನ್ನು ಸಂಗ್ರಹಿಸುವ ಕೆಲಸವನ್ನು ಮಯ್ಯದಿ ಮಾಡುತ್ತಿದ್ದು, ಹಾಗೇ ಈ ಗುರುವಾರವೂ ವಾಮದಪದವು, ಗುರುವಾಯನಕೆರೆ, ಬೆಳ್ತಂಗಡಿ, ಉಜಿರೆ, ಸೋಮಂತಡ್ಕ, ಕಕ್ಕೆಪದವು ಕಡೆಗಳಲ್ಲಿ ನಗದು ಹಣವನ್ನು ಸಂಗ್ರಹಿಸಿ ವಾಪಸ್ಸು ಕಟ್ಟದಪಡ್ಪ , ಅಲಿಪಾದೆಯಾಗಿ ಬಂಟ್ವಾಳ ಕಡೆಗೆ ಬರುತಿದ್ದರು. ಆರೋಪಿಗಳು ಮಯ್ಯದಿ ಅವರಿಗೆ ತಲವಾರು ತೋರಿಸಿ ಬ್ಯಾರಿ ಭಾಷೆಯಲ್ಲೆ ಬೆದರಿಕೆ ಒಡ್ಡಿಹಣ ಸುಲಿಗೆಗೈದಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ. ಮಯ್ಯದಿ ಅವರು ಅಂಗಡಿಗಳಿಂದ ಹಣ ಸಂಗ್ರಹ ಮಾಡುತ್ತಿರುವ ಬಗ್ಗೆ ಮಾಹಿತಿಯನ್ನು ಕಲೆಹಾಕಿರುವ ಆರೋಪಿಗಳು ಸಂಚುರೂಪಿಸಿ ಈ ಕೃತ್ಯವೆಸಗಿರುವ ಬಗ್ಗೆ ಪೊಲೀಸರು ತಮ್ಮ ಪ್ರಾಥಮಿಕ ತನಿಖೆಯಲ್ಲಿ ಶಂಕಿಸಿದ್ದಾರೆ. ಪ್ರಕರಣ ದಾಖಲಿಸಿರುವ ಬಂಟ್ವಾಳ ಗ್ರಾಮಾಂತರ ಪೊಲೀಸರು ಆರೋಪಿಗಳ ಶೋಧ ಕಾರ್ಯ ನಡೆಸುತ್ತಿದ್ದಾರೆ.

Must Read