August 20, 2026
Thursday, August 20, 2026
spot_img

ನಕಲಿ ಔಷಧ ದಂಧೆ ತನಿಖೆಗೆ ಸಿಎಂ ಖಡಕ್ ಆಕ್ಷನ್: ಜಂಟಿ ಕಮಿಷನರ್ ವಂಶಿಕೃಷ್ಣ ನೇತೃತ್ವದಲ್ಲಿ ‘SIT’ ರಚನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೆಂಗಳೂರು ದಕ್ಷಿಣ ಜಿಲ್ಲೆಯ ವ್ಯಾಪ್ತಿಯಲ್ಲಿ ಬಯಲಾದ ಬೃಹತ್ ನಕಲಿ ಔಷಧ ಜಾಲದ ಪ್ರಕರಣವನ್ನು ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ರೋಗಿಗಳ ಜೀವದ ಜೊತೆ ಚೆಲ್ಲಾಟವಾಡಿದ ಈ ಮೆಡಿಕಲ್ ಮಾಫಿಯಾವನ್ನು ಬೇರುಸಹಿತ ಕಿತ್ತೊಗೆಯಲು ಜಂಟಿ ಪೊಲೀಸ್ ಆಯುಕ್ತ ಸಿ. ವಂಶಿಕೃಷ್ಣ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (SIT) ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.

ಎಸ್‌ಐಟಿ ತಂಡದಲ್ಲಿ ಯಾರಿದ್ದಾರೆ?

ಈ ವಿಶೇಷ ತನಿಖಾ ತಂಡವು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಅಪರ ಪೊಲೀಸ್ ಮಹಾನಿರ್ದೇಶಕರ (ADGP) ನೇರ ಮೇಲ್ವಿಚಾರಣೆಯಲ್ಲಿ ಈ ತಂಡ ಕೆಲಸ ಮಾಡಲಿದೆ. ತಂಡದಲ್ಲಿ ಪೊಲೀಸ್ ಅಧೀಕ್ಷಕ ಶಿವಪ್ರಕಾಶ್ ದೇವರಾಜು, ಸಿಐಡಿ ಪೊಲೀಸ್ ಅಧೀಕ್ಷಕ ಲೋಕೇಶ್ ಬಿ. ಜಗಲಾಸರ್, ಸಹಾಯಕ ಔಷಧ ನಿಯಂತ್ರಕರಾದ ಮಂಜುನಾಥ ರೆಡ್ಡಿ, ನಮ್ರತಾ ಹಲ್ಲೂರು ಹಾಗೂ ಔಷಧ ನಿರೀಕ್ಷಕಿ ನೇಹಾ ಮುರ್ಗಿ ಅವರು ಸದಸ್ಯರಾಗಿದ್ದಾರೆ.

ಎಲ್ಲಾ ಪ್ರಕರಣಗಳು ಎಸ್‌ಐಟಿಗೆ ವರ್ಗಾವಣೆ:

 ಈಗಾಗಲೇ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಸೇರಿದಂತೆ, ರಾಜ್ಯಾದ್ಯಂತ ಈ ಜಾಲಕ್ಕೆ ಸಂಬಂಧಿಸಿದಂತೆ ದಾಖಲಾಗುವ ಎಲ್ಲಾ ಎಫ್‌ಐಆರ್‌ಗಳನ್ನು ಈ ವಿಶೇಷ ತನಿಖಾ ತಂಡಕ್ಕೆ (SIT) ವರ್ಗಾಯಿಸಿ ಸಮಗ್ರ ತನಿಖೆ ನಡೆಸಲು ಸರ್ಕಾರ ಸೂಚಿಸಿದೆ.

ಏನಿದು ಘಟನೆ:

ಆಗಸ್ಟ್ 18ರಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಮತ್ತು ದೊಡ್ಡೇರಿ ಭಾಗದ ಫಾರ್ಮ್‌ಹೌಸ್‌ಗಳು ಹಾಗೂ ಅನಧಿಕೃತ ಪ್ಯಾಕಿಂಗ್ ಘಟಕಗಳ ಮೇಲೆ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಪ್ರಸಿದ್ಧ ಬಹುರಾಷ್ಟ್ರೀಯ ಫಾರ್ಮಾ ಕಂಪನಿಗಳ ನಕಲಿ ಲೇಬಲ್ ಹೊಂದಿದ್ದ ಸುಮಾರು 4.5 ರಿಂದ 5 ಕೋಟಿ ರೂಪಾಯಿ ಮೌಲ್ಯದ ನಕಲಿ ಜೀವರಕ್ಷಕ ಔಷಧಗಳನ್ನು ಜಪ್ತಿ ಮಾಡಲಾಗಿತ್ತು.

ಇದನ್ನೂ ಓದಿ:

ರೋಗಿಗಳ ಜೀವದ ಜೊತೆ ಚೆಲ್ಲಾಟ

ಈ ಜಾಲದ ಖದೀಮರು ಆಸ್ಪತ್ರೆಗಳ ತುರ್ತು ನಿಗಾ ಘಟಕಗಳಲ್ಲಿ (ICU) ಗಂಭೀರ ಕಾಯಿಲೆಗಳಿಗೆ ಬಳಸುವ ಅತ್ಯಂತ ದುಬಾರಿ ಜೀವರಕ್ಷಕ ಔಷಧಗಳನ್ನು ಕಳಪೆ ಮಟ್ಟದಲ್ಲಿ ನಕಲಿ ತಯಾರಿಸುತ್ತಿದ್ದರು. ಬಳಿಕ ವಿವಿಧ ಆಸ್ಪತ್ರೆಗಳು ಮತ್ತು ಮಾರುಕಟ್ಟೆಗೆ ಶೇ. 50 ರಷ್ಟು ಭಾರಿ ರಿಯಾಯಿತಿ ದರದಲ್ಲಿ ಸರಬರಾಜು ಮಾಡುತ್ತಿದ್ದ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !