ಪ್ರಕರಣದ ವಿಚಾರಣೆ ನಡೆಯೋವರೆಗೆ ಧಾರ್ಮಿಕ ಸಂಕೇತ ಧರಿಸುವಂತಿಲ್ಲ : ಸಿಜೆ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಪ್ರಶ್ನಿಸಿ ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ನ ಪೂರ್ಣ ಪೀಠವು ಸೋಮವಾರ ಮಧ್ಯಾಹ್ನ 2.30ಕ್ಕೆ ಮುಂದೂಡಿದೆ. ಅಲ್ಲದೇ ಮೊಕದ್ದಮೆ ನ್ಯಾಯಾಲಯದಲ್ಲಿರುವಾಗ, ಪ್ರತಿಯೊಬ್ಬರೂ ಧಾರ್ಮಿಕ ಆಚರಣೆ ಅಥವಾ ಗುರುತುಗಳನ್ನು ಅಳವಡಿಸಿಕೊಳ್ಳುವುದನ್ನು ನಿರ್ಬಂಧಿಸುವುದಾಗಿ ನ್ಯಾಯಪೀಠ ಹೇಳಿದೆ.

ಧರ್ಮಸೂಕ್ಷ್ಮವಾದ ಕಾರಣ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ಏಕ ಸದಸ್ಯ ಪೀಠವು ಈ ಅರ್ಜಿಗಳನ್ನು ವಿಸ್ತೃತ ಪೀಠಕ್ಕೆ ಉಲ್ಲೇಖಿಸಿತ್ತು. ಮಧ್ಯಂತರ ಆದೇಶದ ಪ್ರಶ್ನೆಯನ್ನೂ ವಿಸ್ತೃತ ಪೀಠವು ಪರಿಗಣಿಸುತ್ತದೆ ಎಂದು ನ್ಯಾ. ದೀಕ್ಷಿತ್ ಹೇಳಿದ್ದರು. ಇಂದು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾಯಮೂರ್ತಿ ಜೆ.ಎಂ. ಖಾಜಿ ಅವರು ಇರುವ ಪೀಠವು ಹಿಜಾಬ್ ಕುರಿತ ಮೊಕದ್ದಮೆಗಳ ವಿಚಾರಣೆ ನಡೆಸುತ್ತಿದ್ದಾರೆ.

ಅರ್ಜಿದಾರರ ಪರ ವಕೀಲರು ಹಿಜಾಬ್ ಕುರಿತು ರಾಜ್ಯ ಸರಕಾರ ಹೊರಡಿಸಿರುವ ಸುತ್ತೋಲೆಯನ್ನು ಪ್ರಶ್ನಿಸಿ, ಕೇರಳ ಹೈಕೋರ್ಟ್‌ನ ತೀರ್ಪಿನ ಹಿನ್ನೆಲೆಯಲ್ಲಿ ವಾದ ಮಂಡಿಸಿದರು. ಅರ್ಜಿದಾರರ ಪರ ವಕೀಲರು ಕೇರಳ ಹೈಕೋರ್ಟ್ ವೈಯಕ್ತಿಕ ಹಕ್ಕುಗಳನ್ನು ಸಾಂಸ್ಥಿಕ ಹಕ್ಕುಗಳೊಂದಿಗೆ ಸಮತೋಲನಗೊಳಿಸುವ ಬಗ್ಗೆ ಮಾತನಾಡಿದೆ ಎಂದು ವಿವರಿಸಿದರು. ಸರಕಾರದ ಸುತ್ತೋಲೆಯಲ್ಲಿ ಕೇರಳ ತೀರ್ಪನ್ನು ಉಲ್ಲೇಖಿಸುವ ಮೂಲಕ ಮಾಡಿದ ತಪ್ಪೇನು? ಅಲ್ಲದೇ ಸಮಾಜದ ಹಿತಾಸಕ್ತಿ ಕಾಪಾಡಲು ಸರಕಾರ ಈ ತೀರ್ಪನ್ನು ಪರಿಗಣಿಸಿದೆ. ಅವರೇನು ತಪ್ಪು ಮಾಡಿದ್ದಾರೆ? ಎಂದು ಸಿಜೆ ಪ್ರಶ್ನಿಸಿದರು. ಖಾಸಗಿ ಸಂಸ್ಥೆಯೊಂದರ ಹಿನ್ನೆಲೆಯಲ್ಲಿ ಈ ತೀರ್ಪು ಬಂದಿದೆ ಎಂದು ಅರ್ಜಿದಾರರ ಪರ ವಕೀಲರು ಹೇಳಿದ್ದು, ಸಿಜೆ ಅವರು ಖಾಸಗಿ ಸಂಸ್ಥೆಗಳು ಸಹ ಸಂವಿಧಾನದ ಅಡಿಯಲ್ಲಿವೆ. ಸಾಮಾನ್ಯ ಕಾನೂನು ಅವರಿಗೂ ಅನ್ವಯಿಸುತ್ತದೆ ಎಂದು ಹೇಳಿದರು.

ಇದು ಕೆಲವೇ ದಿನಗಳ ವಿಷಯ, ದಯವಿಟ್ಟು ಸಹಕರಿಸಿ. ನಾವು ವಿಚಾರಣೆ ನಡೆಸುತ್ತಿರುವಾಗ ಪ್ರತಿಯೊಬ್ಬರೂ ಧಾರ್ಮಿಕ ಆಚರಣೆಗಳನ್ನು ಅಳವಡಿಸಿಕೊಳ್ಳುವುದನ್ನು ನಿರ್ಬಂಧಿಸುತ್ತೇವೆ ಎಂದು ಮುಖ್ಯ ನ್ಯಾಯಧೀಶ ಅವಸ್ಥಿ ಹೇಳಿದ್ದು, ವಿಚಾರಣೆಯನ್ನು ಸೋಮವಾರ ಮಧ್ಯಾಹ್ನ 2.30ಕ್ಕೆ ಮುಂದೂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!