ಹೊಸದಿಗಂತ ವರದಿ, ಮೈಸೂರು
ಹಿಜಾಬ್, ಕೇಸರಿ ಶಾಲು ವಿವಾದ ವಿಚಾರ ರಾಜಕೀಯ ಸ್ವರೂಪ ಪಡೆದಿರುವ ಬಗ್ಗೆ ತನಿಖೆ ನಡೆಸಬೇಕು ಎಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷರಾದ ಮಾಜಿ ಶಾಸಕ ವಾಟಾಳ್‌ನಾಗರಾಜ್ ಒತ್ತಾಯಿಸಿದರು.
ಗುರುವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್, ಕೇಸರಿ ಶಾಲು ವಿವಾದ ರಾಜಕೀಯ ಸ್ವರೂಪ ಪಡೆದಿರುವುದು ಬಹಳ ನೋವಿನ ಸಂಗತಿಯಾಗಿದೆ. ಈ ವಿಚಾರ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ರಾಜ್ಯದ, ದೇಶದ ಮಾನ ಹರಾಜಾಗುತ್ತಿದೆ. ಹಿಜಾಬ್ ಇವತ್ತಿಂದ ಬಂದಿರೋದಲ್ಲ. ಬಹಳಷ್ಟು ವರ್ಷಗಳಿಂದ ಇದೆ. ಈಗ ಹಿಜಾಬ್ ಹಿಂದೆ ಹೋಗಲಿಕ್ಕೆ ಕಾರಣ ಏನು ಎಂದು ಪ್ರಶ್ನಿಸಿದರು.
ಹಿಜಾಬ್ ವಿವಾದ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ನ್ಯಾಯಾಲಯ ಎಲ್ಲಾ ವಿಚಾರಗಳನ್ನ ಗಮನಿಸಿ ದೇಶಕ್ಕೆ ಮಾದರಿಯಾದ ತೀರ್ಪು ನೀಡುತ್ತೆ ಅನ್ನುವ ನಂಬಿಕೆ ಇದೆ ಎಂದರು.
ಶಾಸಕ ಎಂ.ಪಿ. ರೇಣುಕಾಚಾರ್ಯ ಮಹಿಳೆಯರ ಬಗ್ಗೆ ಮಾತನಾಡ್ತಾರೆ. ನಂತರ ಕ್ಷಮೆ ಕೇಳ್ತಾರೆ. ಮಹಿಳೆಯರ ಬಗ್ಗೆ ಅವಹೇಳನವಾಗಿ ಮಾತನಾಡುವ ಇಂತವರು ರಾಜೀನಾಮೆ ಕೊಡಬೇಕು. ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಕೂಡ ಏನೋನು ಮಾತನಾಡುತ್ತಾರೆ. ಹೀಗೆ ಮಾತನಾಡೋದು ಗೌರವವಲ್ಲ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದರು.