ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ರಾಜ್ಯೋತ್ಸವದಂದು ನಾಡಿನ ಎಲ್ಲಾ ಸರ್ಕಾರಿ ಶಾಲೆಗಳಿಗೆ ಸಿದ್ದರಾಮಯ್ಯ ಬಂಪರ್ ಗಿಫ್ಟ್ ಘೋಷಣೆ ಮಾಡಿದ್ದಾರ. ಇಂದಿನಿಂದಲೇ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಉಚಿತ ವಿದ್ಯುತ್ ಹಾಗೂ ಕುಡಿಯುವ ನೀರಿನ ಸೌಲಭ್ಯ ನೀಡುವುದಾಗಿ ತಿಳಿಸಿದರು.
ಬೆಂಗಳೂರಿನ ಕಂಠೀರವ ಕ್ರಿಡಾಂಗಣದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು..ʻಮಕ್ಕಳಿಗೆ ಅನುಕೂಲವಾಗಲೆಂದು ಕುಡಿಯುವ ನೀರು, ಹಾಗೂ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದರು. ಇತ್ತೀಚಿನ ದಿನಗಳಲ್ಲಿ ಅದೆಷ್ಟೋ ಪೋಷಕರು ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳಿಸುತ್ತಿದ್ದಾರೆ. ಇದು ದುರದೃಷ್ಟಕರ ಸಂಗತಿ. ಸರ್ಕಾರಿ ಶಾಲೆಗಳಲ್ಲಿಯೇ ಆಂಗ್ಲ, ಮಾಧ್ಯಮ, ಮಧಾಹ್ನ ಬಿಸಿಯೂಟ, ಮೂಲಭೂತ ಸೌಕರ್ಯಗಳು, ಪಠ್ಯೇತರ ಚಟುವಟಿಕೆಗಳು ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಪೋಷಕರಿಗೆ ಸರ್ಕಾರಿ ಶಾಲೆಗಳ ಮೇಲೆ ನಂಬಿಕೆಯೇ ಬರುತ್ತಿಲ್ಲ ಎಂದರು.
ಇಂದು ಕನ್ನಡ ಬಿಟ್ಟು ಬೇರೆ ಭಾಷೆ ಮಾತನಾಡುವುದಿಲ್ಲ ಎಂಬ ಪ್ರತಿಜ್ಞೆ ಮಾಡುವ ಪರಿಸ್ಥಿತಿ ಬಂದಿದೆ. ರಾಜ್ಯದಲ್ಲಿ ಸರ್ಕಾರದ ಆಡಳಿತ ಕನ್ನಡ ಭಾಷೆಯಲ್ಲಿಯೇ ಆಗಬೇಕು. ಈ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು, ರಾಜಕಾರಣಿಗಳು ಕನ್ನಡದಲ್ಲಿ ಮಾತನಾಡುವಂತೆ ಸಲಹೆ ನೀಡಿದರು.
ಸ್ಪರ್ಧಾತ್ಮಕ ಪರೀಕ್ಷೆಗಳು ಕನ್ನಡದಲ್ಲಿ ನಡೆಯಬೇಕು
ಕೇಂದ್ರ ಸರ್ಕಾರದ ಸ್ಪರ್ಧಾತ್ಮಕ ಪರೀಕ್ಷಗೆಳು ಆಂಗ್ಲ ಹಾಗೂ ಹಿಂದಿ ಭಾಷೆಯಲ್ಲಿ ನಡೆಯುತ್ತಿವೆ. ಕನ್ನಡಿಗರಿಗೆ ಕನ್ನಡ ಭಾಷೆಯಲ್ಲಿ ಪರೀಕ್ಷೆ ನಡೆಸುವಂತೆ ಕೇಂದ್ರಕ್ಕೆ ಪತ್ರ ಬರೆಯುವುದಾಗಿ ಸಿಎಂ ತಿಳಿಸಿದರು.