ಅಂಬಿ ಸ್ಮಾರಕ ಲೋಕಾರ್ಪಣೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಬೆಂಗಳೂರು ನಗರದ ಕಂಠೀರವ ಸ್ಟುಡಿಯೋದಲ್ಲಿ ನಿರ್ಮಿಸಲಾಗಿರುವ ಅಂಬರೀಶ್‌ ಸ್ಮಾರಕವನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಲೋಕಾರ್ಪಣೆ ಮಾಡಿದರು.

ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ಜೀವನದಲ್ಲಿ ಯಾವತ್ತೂ ಅಂಬಿ ತನಗೆ ಇಂತಹದ್ದು ಬೇಕು ಅಂತ ಬಯಸಿದವರಲ್ಲ. ಸಿನಿಮಾ ರಂಗ ಹಾಗೂ ಜನರಿಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅಂಬಿಯದ್ದು ಯಾವತ್ತೂ ಕೊಟ್ಟ ಕೈ ಆಗಿದೆಯೇ ಹೊರತು ಪಡೆದ ಕೈ ಅಲ್ಲ. ಜನರ ಪ್ರೀತಿಯೊಂದೆ ಅವರು ಬಯಸಿದ್ದು, ಅದು‌ ಸಿಕ್ಕಿದೆ, ಸಿಗುತ್ತಿದೆ ಎಂದರು.

ಅಂಬರೀಶ್ ಏನೇನು ಕೆಲಸ ಮಾಡಿದ್ದರು ಎಂಬುವುದು ಮಂಡ್ಯದ ಜನರನ್ನು ಕೇಳಿದರೆ ಸಾಕು. ಯಾವ ಕೆಲಸ ಮಾಡಿಕೊಟ್ಟರೂ ಕ್ರೆಡಿಟ್ ಯಾವತ್ತೂ ತಗೊಂಡಿಲ್ಲ. ಅಂಬರೀಶ್‌ ಎಂದರೆ ಎನರ್ಜಿ, ಅವರ ವ್ಯಕ್ತಿತ್ವದಲ್ಲೇ ಎನರ್ಜಿ ಇತ್ತು. ಎಲ್ಲೇ ಹೋದರೂ ಸಂತೋಷ ಹಂಚುತ್ತಿದ್ದ. ಯಾವುದೇ ಗಂಭೀರ ಚರ್ಚೆಯಾದರೂ ಅಲ್ಲಿ ಅಂಬಿ ಇದ್ದರೆ ಸಮಸ್ಯೆ ಬಗೆಹರಿಯುತ್ತಿತ್ತು. ಅಂಬರೀಶ್ ಸಹಜ ಜೀವನ ನಡೆಸಿದ್ದಾರೆ, ಒಬ್ಬ ವ್ಯಕ್ತಿ ಆತ್ಮಸಾಕ್ಷಿ ಒಪ್ಪುವಂತೆ ಬದುಕುವುದು ಕಷ್ಟ. ಆದರೆ, ಆ ರೀತಿಯಲ್ಲಿ ಅಂಬರೀಶ್ ಬದುಕಿದ್ದಾನೆ. ಆದರೆ, ನಾವೆಲ್ಲ ಆತ್ಮಸಾಕ್ಷಿ ಪಕ್ಕಕ್ಕಿಟ್ಟು ಬದುಕುತ್ತಿದ್ದೇವೆ. ಅಂಬಿಗೆ ನಟನೆ ಮಾಡುವುದು ಕಷ್ಟ ಆಗುತ್ತಿರಲಿಲ್ಲ. ಸಹಜ, ಲೀಲಾಜಾಲವಾಗಿ ನಟಿಸುತ್ತಿದ್ದ ಎಂದು ಸ್ಮರಿಸಿದರು.

ಸಂಸದೆ ಸುಮಲತಾ ಅಂಬರೀಶ್‌ ಮಾತನಾಡಿ, ಅಂಬರೀಶ್ ದೇವರ ಮಗ. ದೇವರ ಮಗನ ಜತೆ 22 ವರ್ಷ ಧರ್ಮಪತ್ನಿಯಾಗಿ ಬದುಕಲು ಅವಕಾಶ ಸಿಕ್ಕಿತ್ತು. ಅವರ ಹೆಸರಿಗೆ ಕಪ್ಪು ಚುಕ್ಕೆ ಬಾರದಂತೆ ನಡೆದುಕೊಳ್ಳುತ್ತೇವೆ ಎಂದು ಹೇಳಿ ಕಣ್ಣೀರಿಡುತ್ತಾ ಭಾವುಕರಾದರು.

ಸೋಮವಾರ ಸಂಜೆ ನಗರದ ರೇಸ್‌ ಕೋರ್ಸ್‌ ರಸ್ತೆಗೆ ‘ರೆಬೆಲ್‌ ಸ್ಟಾರ್‌ ಅಂಬರೀಶ್‌ ರಸ್ತೆ’ (Actor Ambareesh) ಎಂದು ಮರು ನಾಮಕರಣ ಮಾಡಿಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!