ಮೂಲಸೌಕರ್ಯ ದುರಸ್ತಿಗೆ 500 ಕೋಟಿ ಅನುದಾನ ಘೋಷಿಸಿದ ಸಿಎಂ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅತಿವೃಷ್ಟಿ, ಪ್ರವಾಹದಿಂದ ಹಾನಿಯಾಗಿರುವ ಬಗ್ಗೆ ವರದಿ ಬಂದ ಹಿನ್ನೆಲೆಯಲ್ಲಿ ಕೂಡಲೇ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಸಿಎಂ ತಿಳಿಸಿದ್ರು. ಆರ್‌ಡಿಪಿಆರ್‌ ಯೋಜನೆ, ರಸ್ತೆಗಳು , ವಿದ್ಯುತ್, ಸೇತುವೆ ದುರಸ್ತಿಗಾಗಿ 500 ಕೋಟಿ ರೂ.ಗಳನ್ನು ಕೂಡಲೇ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಪ್ರವಾಹವನ್ನು ಸಮರೋಪಾದಿಯಲ್ಲಿ ಎದುರಿಸಲು ಅಧಿಕಾರಿಗಳು, ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಎಫ್, ಜಿಲ್ಲಾಡಳಿತ ಹಾಗೂ ಶಾಸಕರು ಸನ್ನದ್ದರಾಗಿದ್ದೇವೆ. ಇದೀಗ ರಾಜ್ಯ ಸರ್ಕಾರದಿಂದ ಅನುದಾನ ನೀಡಲಿದ್ದು, ಫೈನಲ್‌ ಪಟ್ಟಿ ಬಂದ ಬಳಿಕ ಕೇಂದ್ರದ ಬಳಿ ಪರಿಹಾರಕ್ಕೆ ಮನವಿ ಸಲಲಿಸಲಾಗುವುದು ಎಂದರು.

ಮನೆ ಹಾನಿಗೆ ಪರಿಹಾರ

ಈ ವರ್ಷ ಕರಾವಳಿ ಭಾಗದಲ್ಲಿ ಹೆಚ್ಚು ಮಳೆಯಾಗಿದ್ದು, ದಕ್ಷಿಣ ಕನ್ನಡದಲ್ಲಿ 429 ಮನೆಗಳು, ಉತ್ತರ ಕನ್ನಡ ಜಿಲ್ಲೆಯಲ್ಲಿ 437 ಮನೆಗಳು, ಉಡುಪಿಯಲ್ಲಿ 196 ಮನೆಗಳು ಹಾನಿಯಾಗಿವೆ. 1062 ಮನೆಗಳು ಹಾನಿಗೊಳಗಾಗಿವೆ. ಮನೆ ಬಿದ್ದ ತಕ್ಷಣ ಎನ್.ಡಿ.ಆರ್. ಎಫ್ ಪ್ರಕಾರ 3200 ರೂ.ಗಳನ್ನು ನೀಡಬೇಕಿತ್ತು. ರಾಜ್ಯ ಸರ್ಕಾರ 6800 ಜಮಾ ಮಾಡಿ ಒಟ್ಟು 10 ಸಾವಿರ ರೂ.ಗಳನ್ನು ಹಾನಿಯಾದ ಮನೆಗಳಿಗೆ ತಕ್ಷಣ ನೀಡಬೇಕೆಂದು ಆದೇಶ ಹೊರಡಿಸಿದೆ. ಮನೆಹಾನಿಗೆ ಎ, ಬಿ, ಸಿ ವರ್ಗೀಕರಣ ಮಾಡಿ ‘ಎ’ ವರ್ಗಕ್ಕೆ ರೂ. 5 ಲಕ್ಷ, ಬಿ ವರ್ಗಕ್ಕೆ ರೂ. 3 ಲಕ್ಷ ರೂ.ಗಳು, ಅಲ್ಪ ಹಾನಿಯಾಗಿರುವ ಮನೆಗಳಿಗೆ 50 ಸಾವಿರ ರೂಗಳನ್ನು ನೀಡಲಾಗುವುದು.

ಬೆಳೆ ಪರಿಹಾರ

ಭಾರೀ ಮಳೆಗೆ ಕೃಷಿ ಮತ್ತು ತೋಟಗಾರಿಕೆಯ ಒಟ್ಟು 355 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಕೃಷಿ ಇನ್ ಪುಟ್ ಸಹಾಯಧನವನ್ನು ಒಣಬೇಸಾಯಕ್ಕೆ ಎನ್.ಡಿ.ಆರ್.ಎಫ್ ಅಡಿಯಲ್ಲಿ 6,800ರೂ ನೀಡಲಾಗುತ್ತದೆ. ರಾಜ್ಯ ಸರ್ಕಾರ 6800 ಜಮಾ ಮಾಡಿ ಒಟ್ಟು 13 ಸಾವಿರ ನೀಡುತ್ತಿದೆ. ಈ ವರ್ಷವೂ ಒಂದು ಹೆಕ್ಟೇರ್ ಗೆ 13,600 ರೂ.ಗಳ ಪರಿಹಾರ ಮುಂದುವರೆಸುತ್ತಿದ್ದೇವೆ. ನೀರಾವರಿ ಬೆಳೆಗಳಿಗೆ ಕೇಂದ್ರ ಸರ್ಕಾರ 13 500 ನೀಡಿದರೆ ರಾಜ್ಯ ಸರ್ಕಾರ 25 ಸಾವಿರ ನೀಡುತ್ತದೆ. ತೋಟಗಾರಿಕಾ ಬೆಳೆಗಳಿಗೆ ಕೇಂದ್ರ 18 ಸಾವಿರ ರೂ.ನೀಡಿದರೆ, ನಾವು 28 ಸಾವಿರ ನೀಡುತ್ತಿದ್ದೇವೆ. ಇದು ರಾಜ್ಯ ಸರ್ಕಾರ ರೈತರ ಅನುಕೂಲಕ್ಕಾಗಿ ಬೊಕ್ಕಸದಿಂದ ಹೆಚ್ಚುವರಿ ಪರಿಹಾರ ನೀಡುತ್ತಿರುವುದಾಗಿ ಸಿಎಂ ತಿಳಿಸಿದ್ರು.

ಕಾಳಜಿ ಕೇಂದ್ರ

ಭಾರಿ ಮಳೆಯಿಂದಾಗಿ ತೀರಿಕೊಂಡವರಿಗೆ ಕೇಂದ್ರ ಸರ್ಕಾರ 4 ಲಕ್ಷ ಪರಿಹಾರ ನೀಡದರೆ, ರಾಜ್ಯ ಸರ್ಕಾರ 5 ಲಕ್ಷ ರೂ.ಗಳನ್ನು ನೀಡುತ್ತಿದೆ. ಕಾಳಜಿ ಕೇಂದ್ರಗಳಿಗೆ ಕೆಲವರು ಬಂದರೆ , ಕೆಲವರು ಬರುವುದಿಲ್ಲ. ಈ ಬಾರಿ ಅವರಿಗೆ ನೀಡುವ ಆಹಾರದಲ್ಲಿ ಪೌಷ್ಟಿಕಾಂಶ ನೀಡಲು ಮೊಟ್ಟೆ ನೀಡಲಾಗುತ್ತಿದೆ. ಸಂಬಂಧಿಕರ ಮನೆಗಲ್ಲಿ ಇರುವವರಿಗೆ ಆಹಾರ ಕಿಟ್ ನೀಡಲು ಆದೇಶ ನೀಡಿದೆ.

ರಸ್ತೆಗಳ ಹಾನಿ
ಲೋಕೋಪಯೋಗಿ ಹಾಗೂ ಗ್ರಾಮೀಣಾಭಿವೃದ್ಧಿ ರಸ್ತೆಗಳು ಸೇರಿ ದಕ್ಷಿಣ ಕನ್ನಡ- 727 ಕಿ.ಮಿ, ಉತ್ತರ ಕನ್ನಡ 500 ಕಿ.ಮೀ, ಉಡುಪಿ 960 ಕಿ.ಮೀ, 2187 ಕಿ.ಮೀ ರಸ್ತೆ ಹಾನಿಗೊಳಗಾಗಿವೆ.

ವಿದ್ಯುತ್ ಸಂಪರ್ಕ
ಮೂರು ಜಿಲ್ಲೆಗಳಲ್ಲಿ 5595 ವಿದ್ಯುತ್ ಕಂಬಗಳು ಬಿದ್ದಿವೆ. ಇವುಗಳನ್ನು ಪುನರ್ ಸ್ಥಾಪಿಸುವ ಕೆಲಸ ಭಾರದಿಂದ ಸಾಗಿದೆ. 422 ಟ್ರಾನ್ಸಫಾರ್ಮರ್ ಗಳ ದುರಸ್ತಿ ಕೆಲಸ ನಡೆದಿದೆ. 168 ಸೇತುವೆ ಮತ್ತು ಕನ್ವಲ್ಟ್ ಗಳು ಹಾನಿಯಾಗಿವೆ.

ಕಡಲ ಕೊರೆತ

ಕಡಲ ಕೊರೆತ ತಕ್ಷಣ ನಿಲ್ಲಿಸಲು ಜಿಲ್ಲಾಡಳಿತಕ್ಕೆ ಕೂಡಲೇ ಮೂರು ಜಿಲ್ಲೆಗಳಿಗೆ ಹಣವನ್ನು ಎಸ್ ಡಿ ಆರ್ ಎಫ್ ಅಡಿ ಒದಗಿಸಲಾಗುವುದು. ತಾತ್ಕಾಲಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗುವುದು ಎಂದರು. ಶಾಶ್ವತ ಪರಿಹಾರಕ್ಕೆ 2-3 ತಿಂಗಳಲ್ಲಿ ಯೋಜನೆ ರೂಪಿಸಲಾಗುವುದು. ವಿಶೇಷ ಅನುದಾನವನ್ನು ಇದಕ್ಕಾಗಿ ಒದಗಿಸಲಾಗುವುದು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!