ಹೇಳಿಕೆಗಳಿಗೆ ಪ್ರತಿಕ್ರಿಯಿಸುತ್ತಿರಲಾರೆ, ಕಾನೂನು ಸುವ್ಯವಸ್ಥೆ ಕಾಪಾಡೋದು ಗೊತ್ತು- ಮುಖ್ಯಮಂತ್ರಿ ಬೊಮ್ಮಾಯಿ

 

ಹೊಸದಿಗಂತ ಡಿಜಿಟಲ್ ಡೆಸ್ಕ್

ಹೊಸದಿಲ್ಲಿ: ಕಾನೂನು ಎಲ್ಲರಿಗೂ ಒಂದೇ. ಎಲ್ಲರೂ ಅದಕ್ಕೆ ತಲೆಬಾಗಿ ನಡೆಯಲೇಬೇಕು. ನಮ್ಮ ಸರಕಾರ, ಕಾನೂನು ಮತ್ತು ಸುವ್ಯವಸ್ಥೆ, ಶಾಂತಿ ಕಾಪಾಡಲು ಪ್ರಾಮುಖ್ಯತೆ ನೀಡುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ರಾಜ್ಯದಲ್ಲಿ ಹಲಾಲ್ ಮತ್ತು ಹಿಜಾಬ್ ವಿಚಾರಗಳ ಬಗ್ಗೆ ಸುದ್ದಿಗಾರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಧಾರ್ಮಿಕ ಮತ್ತು ಸಾಮಾಜಿಕ ಆಚರಣೆಗಳು ನಮ್ಮ ನಮ್ಮ ಸಮಾಜದಲ್ಲಿ ಯಾವ ರೀತಿ ಆಚರಿಸಬೇಕು ಎನ್ನುವುದು ಧಾರ್ಮಿಕ- ಸಾಮಾಜಿಕ ವಿಚಾರ ಎಂದರು.

ಸಮಾಜದಲ್ಲಿ ಶಾಂತಿ ಕದಡುತ್ತಿರುವ ಬಗ್ಗೆ ಸರಕಾರ ಕೈ ಕಟ್ಟಿ ಕುಳಿತಿದೆ ಏನೂ ಕ್ರಮ ಕೈಗೊಂಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಅವರು ಏನಾದರೂ ಅಂದುಕೊಳ್ಳಲಿ. ವೈಯಕ್ತಿಕ ವಿಚಾರಗಳನ್ನು ಜನ ತೀರ್ಮಾನ ಮಾಡುತ್ತಾರೆ. ಅವರು ಯಾವಾಗ ಮೂಕರಾಗಿದ್ದರು, ಯಾವಾಗ ಏನು ಮಾತನಾಡುತ್ತಾರೆ. ನಾನು ಏನು ಮಾತನಾಡುತ್ತೇನೆ ಎನ್ನುವುದನ್ನು ಜನ ತೀರ್ಮಾನಿಸುತ್ತಾರೆ. ನಾನು ಅದಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ. ನಾವು ಯಾವಾಗ ಕೆಲಸ ಮಾಡಬೇಕಿತ್ತೋ ಆಗ ಮಾಡಿದ್ದೇವೆ. ಹಿಜಾಬ್ ವಿಚಾರದಲ್ಲಿ ನ್ಯಾಯಾಲಯದಲ್ಲಿ ಏನು ಹೇಳಬೇಕೋ ಅದನ್ನು ಹೇಳಿದ್ದೇವೆ. ಹಲವಾರು ವಿಚಾರಗಳು ಬಂದಾಗ ಅಧಿಕಾರಿಗಳಿಗೆ ಸೂಚನೆ ಕೊಟ್ಟು ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದೇವೆ. ಹೇಳಿಕೆ ಕೊಟ್ಟರಷ್ಟೇ ಆಡಳಿತ ಅಲ್ಲ. ಆಡಳಿತ ಮಾಡಲು ರೀತಿ ನೀತಿಗಳಿವೆ. ಅದರಂತೆ ನಾವು ಆಡಳಿತ ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!