ಗಡಿ ವಿವಾದವನ್ನು ಉದ್ರೇಕಗೊಳಿಸದಂತೆ ಮಹಾ ಉಪಮುಖ್ಯಮಂತ್ರಿ ಫಡ್ನವಿಸ್‌ ಗೆ ಕಿವಿಮಾತು ಹೇಳಿದ ಸಿಎಂ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗಡಿ ವಿವಾದವನ್ನು ಅನಗತ್ಯವಾಗಿ ಉದ್ರೇಕಗೊಳಿಸದಂತೆ ಸಿಎಂ ಬೊಮ್ಮಾಯಿ ಅವರು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಅವರಿಗೆ ಬುದ್ಧಿವಾದ ಹೇಳಿದ್ದಾರೆ.

ಬೆಳಗಾವಿಯ ಹಿರೇಬಾಗೇವಾಡಿ ಬಳಿ ಕರವೇ ಕಾರ್ಯಕರ್ತರು ಮಹಾರಾಷ್ಟ್ರ ನೋಂದಣಿ ಹೊಂದಿದ ಕೆಲವು ಲಾರಿಗಳಿಗೆ ಹಾನಿಯುಂಟು ಮಾಡಿದ ಬಳಿಕ ಡಿಸಿಎಂ ದೇವೇಂದ್ರ ಫಡ್ನವಿಸ್‌ ಅವರು ಸಿಎಂ ಬೊಮ್ಮಾಯಿ ಅವರಿಗೆ ಕರೆ ಮಾಡಿದ್ದರು.ಈ ವೇಳೆ ಬೊಮ್ಮಾಯಿ ಅವರು ಮಹಾರಾಷ್ಟ್ರ ತನ್ನ ನಿಲುವನ್ನು ಬದಲಿಸಿಕೊಳ್ಳಬೇಕು ಎಂದು ಸೂಚನೆಯನ್ನು ನೀಡಿದರು.

ಪುಣೆಯಲ್ಲಿ ಕರ್ನಾಟಕಕ್ಕೆ ಸೇರಿದ ಬಸ್‌ಗಳಿಗೆ ಮಸಿ ಬಳಿಯುವ ಕೆಲಸ ನಡೆಸಿದೆ. ಈ ಎರಡೂ ವಿಚಾರಗಳನ್ನು ಬೊಮ್ಮಾಯಿ ಅವರು ಪ್ರಸ್ತಾಪಿಸಿ ವಿವಾದವನ್ನು ಅನಗತ್ಯವಾಗಿ ಪ್ರಚೋದಿಸುವುದರಿಂದ ಎರಡೂ ರಾಜ್ಯಗಳ ಜನಸಾಮಾನ್ಯರಿಗೆ ತೊಂದರೆಯಾಗಲಿದೆ ಎಂದು ವಿವರಿಸಿದರು.

ವಿವಾದವೇ ಇಲ್ಲದ, ಈಗಾಗಲೇ ಮುಗಿದುಹೋಗಿರುವ ಗಡಿ ವಿಚಾರವನ್ನು ಸುಪ್ರೀಂಕೋರ್ಟ್‌ನಲ್ಲಿ ದಾವೆಯ ಮೂಲಕ ಪ್ರಶ್ನಿಸಿದ ಮಹಾರಾಷ್ಟ್ರ ಸರಕಾರದ ನಿಲುವನ್ನು ಬೊಮ್ಮಾಯಿ ಪ್ರಶ್ನಿಸಿದರು. ಜತೆಗೆ ಪರಿಸ್ಥಿತಿ ಅತ್ಯಂತ ಸಂಕೀರ್ಣವಾಗಿರುವಾಗ ಮಹಾರಾಷ್ಟ್ರದ ಇಬ್ಬರು ಸಚಿವರು ಬೆಳಗಾವಿಗೆ ಆಗಮಿಸಲು ಹಠ ಹಿಡಿದದ್ದು, ಮಹಾರಾಷ್ಟ್ರ ಏಕೀಕರಣ ಸಮಿತಿಯ ಪುಂಡಾಟಿಕೆಗಳನ್ನು ಪ್ರಸ್ತಾಪಿಸಿದರು. ಇಂಥ ವಿದ್ಯಮಾನಗಳಿಂದ ಎರಡು ರಾಜ್ಯಗಳ ನಡುವಿನ ಸೌಹಾರ್ದ ಸಂಬಂಧ ಹದಗೆಡುವುದಲ್ಲದೆ, ಜನ ಸಾಮಾನ್ಯರು ತೊಂದರೆ ಅನುಭವಿಸುತ್ತಾರೆ ಎಂದು ವಿವರಿಸಿದರು.

ಅಂತಿಮವಾಗಿ ಎರಡೂ ರಾಜ್ಯಗಳು ಕನ್ನಡಿಗರು ಮತ್ತು ಮರಾಠಿಗರ ಆಸ್ತಿಪಾಸ್ತಿ ರಕ್ಷಣೆಗೆ ಸಂಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಲು ಒಪ್ಪಿಕೊಂಡರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!