June 14, 2026
Sunday, June 14, 2026
spot_img

ಭ್ರಷ್ಟಾಚಾರ ಮುಕ್ತ ಕರ್ನಾಟಕಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಮಾಸ್ಟರ್ ಪ್ಲಾನ್: ಅಧಿಕಾರಿಗಳಿಗೆ ಬಿಗ್ ಟಾಸ್ಕ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಜ್ಯದಲ್ಲಿ ಭ್ರಷ್ಟಾಚಾರ ರಹಿತ ಮತ್ತು ಪಾರದರ್ಶಕ ಆಡಳಿತವನ್ನು ತರಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಅತ್ಯಂತ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ. ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಅವರು ಈ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.

ತಂಡವಾಗಿ ಕೆಲಸ ಮಾಡಿ, ಭ್ರಷ್ಟಾಚಾರ ಮುಕ್ತಗೊಳಿಸಿ

ಮುಖ್ಯಮಂತ್ರಿಗಳು ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಪರಸ್ಪರ ಒಗ್ಗಟ್ಟಿನಿಂದ ಹಾಗೂ ಒಂದು ತಂಡವಾಗಿ ಕೆಲಸ ಮಾಡುವಂತೆ ಕರೆ ನೀಡಿದ್ದಾರೆ. ಕಚೇರಿಗಳಿಗೆ ಬರುವ ಸಾಮಾನ್ಯ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಆಡಳಿತ ನಡೆಸಬೇಕು ಮತ್ತು ‘ಭ್ರಷ್ಟಾಚಾರ ಮುಕ್ತ ಕರ್ನಾಟಕ’ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:

ಯಾರ ಒತ್ತಡಕ್ಕೂ ಮಣಿಯಬೇಡಿ

ಕಾನೂನು ಬಾಹಿರ ಕೆಲಸಗಳಿಗಾಗಿ ಅಥವಾ ನಿಯಮಗಳನ್ನು ಮೀರಿ ಕೆಲಸ ಮಾಡಲು ಯಾವುದೇ ರಾಜಕೀಯ ಮುಖಂಡರು, ಸಚಿವರು ಅಥವಾ ಶಾಸಕರು ಅಧಿಕಾರಿಗಳ ಮೇಲೆ ಒತ್ತಡ ತಂದರೂ ಅದಕ್ಕೆ ಯಾವುದೇ ಕಾರಣಕ್ಕೂ ಮಣಿಯಬಾರದು ಎಂದು ಸಿಎಂ ಅಧಿಕಾರಿಗಳಿಗೆ ಧೈರ್ಯ ತುಂಬಿದ್ದಾರೆ. ನಿಯಮಾನುಸಾರ ಮತ್ತು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳ ಪರವಾಗಿ ಸರ್ಕಾರ ನಿಲ್ಲಲಿದೆ ಎಂದು ಅವರು ಭರವಸೆ ನೀಡಿದ್ದಾರೆ.

10ರೂಪಾಯಿಯೂ ಲಂಚ ಕೊಡಬೇಡಿ’

ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ತಮ್ಮ ಅಧಿಕೃತ ಕೆಲಸಗಳಿಗಾಗಿ ಯಾರಿಗೂ ಒಂದು ರೂಪಾಯಿ ಕೂಡ ಲಂಚ ನೀಡಬಾರದು. ಮಧ್ಯವರ್ತಿಗಳ ಹಾವಳಿಯನ್ನು ಸಂಪೂರ್ಣವಾಗಿ ತಡೆಯಲು ಮತ್ತು ಭ್ರಷ್ಟಾಚಾರಕ್ಕೆ ಆಸ್ಪದ ನೀಡದಂತೆ ತಾಲೂಕು ಹಾಗೂ ಜಿಲ್ಲಾ ಮಟ್ಟದ ಪ್ರತಿಯೊಂದು ಕಚೇರಿಗಳ ಮುಂಭಾಗದಲ್ಲಿ ದೊಡ್ಡದಾದ ಮಾಹಿತಿ ಫಲಕಗಳನ್ನು ಅಳವಡಿಸಬೇಕು. ಈ ಫಲಕಗಳಲ್ಲಿ ಲಂಚ ವಿರೋಧಿ ದೂರುಗಳನ್ನು ಸಲ್ಲಿಸಲು ಸೂಕ್ತವಾದ ದೂರವಾಣಿ ಸಂಖ್ಯೆ ಹಾಗೂ ಅಧಿಕಾರಿಗಳ ವಿವರಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಶಿಸ್ತಿನ ಆಡಳಿತ ಮತ್ತು ಸಮಯ ಪಾಲನೆ

ಸರ್ಕಾರಿ ವ್ಯವಸ್ಥೆಯಲ್ಲಿ ದಕ್ಷತೆಯನ್ನು ವೃದ್ಧಿಸಲು ಇನ್ಮುಂದೆ ರಾಜ್ಯದ ಎಲ್ಲಾ ನೌಕರರು ಮತ್ತು ಹಿರಿಯ ಅಧಿಕಾರಿಗಳು ಬೆಳಗ್ಗೆ 10 ಗಂಟೆಯೊಳಗೆ ಕಡ್ಡಾಯವಾಗಿ ತಮ್ಮ ಕಚೇರಿಗಳಲ್ಲಿ ಹಾಜರಿರಬೇಕು. ಅಧಿಕಾರಿಗಳು ಕಚೇರಿಗೆ ತಡವಾಗಿ ಬರುವುದನ್ನು ತಡೆಯಲು ರಾಜ್ಯ ಮಟ್ಟದಲ್ಲಿ ಕೇಂದ್ರೀಕೃತ ಉಸ್ತುವಾರಿ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದ್ದು, ಸಮಯ ಪಾಲನೆ ಮಾಡದವರ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !