ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ ವಿರುದ್ಧ ಅವಹೇಳಕಾರಿ ಹೇಳಿಕೆ ನೀಡಿದ ಸ್ಟ್ಯಾಂಡ್-ಅಪ್ ಕಾಮೆಡಿಯನ್ ಕುನಾಲ್ ಕಮ್ರಾ ವಿರುದ್ಧ ಶಿವಸೇನಾ ಕಾರ್ಯಕರ್ತರು ಪ್ರಕರಣ ದಾಖಲಿಸಿದ್ದಾರೆ. ಈ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಸಿಎಂ ದೇವೇಂದ್ರ ಫಡ್ನವಿಸ್ ಅವರು, ಕಾಮ್ರಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಕಾಮ್ರಾ ಮಾಡಿದ್ದು ಕಾಮೆಡಿ ಅಲ್ಲ, ಶಿಂಧೆ ಅವರಿಗೆ ಮಾಡಿದ ಅವಮಾನ, ಅದಕ್ಕಾಗಿ ಅವರು ಕ್ಷಮೆ ಕೇಳಬೇಕು. ಇಂತಹ ಅಪಮಾನಗಳನ್ನು ಸಹಿಸಲಾಗಲ್ಲ. ಕಳೆದ ಚುನಾವಣೆಗಳು ದೇಶದ್ರೋಹಿಗಳು ಯಾರೆಂಬುದನ್ನು ಸಾಬೀತು ಮಾಡಿವೆ. ಹೀಗಿದ್ದಾಗ ಅಂತಹ ದೊಡ್ಡ ನಾಯಕನನ್ನು ದ್ರೋಹಿ ಎಂದು ಕರೆಯುವ ಹಕ್ಕು ಯಾರಿಗೂ ಇಲ್ಲ. ಕಾಮ್ರಾ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಕುನಾಲ್ ಕಾಮ್ರಾ, ರಾಹುಲ್ ಗಾಂಧಿ ತೋರಿಸಿದ ಅದೇ ಕೆಂಪು ಸಂವಿಧಾನದ ಪುಸ್ತಕವನ್ನು ಪೋಸ್ಟ್ ಮಾಡಿದ್ದಾರೆ. ಇಬ್ಬರೂ ಸಂವಿಧಾನ ಓದಿಲ್ಲ. ಸಂವಿಧಾನವು ನಮಗೆ ಮಾತನಾಡುವ ಸ್ವಾತಂತ್ರ್ಯ ನೀಡಿದೆ, ಆದರೆ ಅದಕ್ಕೆ ಮಿತಿಗಳಿವೆ. ಈ ದೇಶದಲ್ಲಿ ಸ್ಟ್ಯಾಂಡ್ ಅಪ್ ಕಾಮಿಡಿ ಮಾಡಲು ಸ್ವಾತಂತ್ರ್ಯವಿದೆ, ಹಕ್ಕಿದೆ. ಹಾಗಂತ ಓರ್ವ ಉಪಮುಖ್ಯಮಂತ್ರಿಗಳ ಮಾನಹಾನಿ ಮಾಡುವುದನ್ನು ಸಹಿಸಲ್ಲ. 2024ರ ಚುನಾವಣೆಯಲ್ಲೇ ಮಹಾರಾಷ್ಟ್ರದ ಜನ ʻದೇಶದ್ರೋಹಿʼ ಯಾರೆಂದು ನಿರ್ಧರಿಸಿದ್ದಾರೆ ಎಂದು ಫಡ್ನವಿಸ್ ಹೇಳಿದ್ದಾರೆ.
ಕುನಾಲ್ ಕಾಮ್ರಾ ಹೇಳಿದ್ದೇನು?
ಮುಂಬೈನ ಹ್ಯಾಬಿಟಾಟ್ ಕಾಮಿಡಿ ಕ್ಲಬ್‌ನಲ್ಲಿ ಕಾರ್ಯಕ್ರಮ ನೀಡುವಾಗ ಮಹಾರಾಷ್ಟ್ರದ ರಾಜಕೀಯ ವಿಭಜನೆಯ ಬಗ್ಗೆ ಮಾತನಾಡಿದ್ದರು. ಏಕನಾಥ್ ಶಿಂಧೆ – ಉದ್ದವ್ ಠಾಕ್ರೆ ನಡುವಿನ ರಾಜಕೀಯ ಉಲ್ಲೇಖಿಸುತ್ತಾ ಮೊದಲು ಶಿವಸೇನಾ ಬಿಜೆಪಿಯಿಂದ ಹೊರಬಂದಿತು, ನಂತರ ಶಿವಸೇನಾ ಶಿವಸೇನಾದಿಂದಲೇ ಹೊರಬಂದಿತು. ಎನ್‌ಸಿಪಿಯಿಂದ ಎನ್‌ಸಿಪಿ ಹೊರಬಂದಿತು. ಇವರೆಲ್ಲಾ ಒಂದು ಮತದಾರನಿಗೆ 9 ಬಟನ್‌ಗಳನ್ನು ನೀಡಿದ್ದಾರೆ. ಥಾಣೆಯು ರಾಜಕೀಯ ಭದ್ರಕೋಟೆಯಾಗಿದ್ದು, ಗದ್ದಾರ್ (ದ್ರೋಹಿ) ಆಳ್ವಿಕೆ ಎಂದು ಪರೋಕ್ಷವಾಗಿ ಹಾಡು ಹೇಳುತ್ತಾ ಟೀಕಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.