ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಕೆಲ ರಾಜ್ಯ ಸರ್ಕಾರಗಳು ಇಂಧನ ಮೇಲಿನ ವ್ಯಾಟ್ ಕಡಿಮೆ ಮಾಡಿ, ಜನರಿಗೆ ಅನುಕೂಲವಾಗುವಂತೆ ಮಾಡಬೇಕು ಎಂದು ನಿನ್ನೆ ಮಾತನಾಡಿದ್ರು. ಈ ಬಗ್ಗೆ ಕೆಲವು ರಾಜ್ಯಗಳ ಹೆಸರು ಪ್ರಸ್ತಾಪ ಮಾಡಿದ್ದಕ್ಕೆ ಕಿಡಿ ಕಾರಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪೆಟ್ರೋಲ್, ಡೀಸೆಲ್ ಮತ್ತು ಗೃಹೋಪಯೋಗಿ ವಸ್ತುಗಳ ಬೆಲೆ ಏರಿಕೆ ವಿಚಾರವನ್ನು ಕೇಂದ್ರವು ರಾಜ್ಯಗಳಿಗೆ ಬಿಟ್ಟಿದ್ದು, ಇದೀಗ ರಾಜ್ಯಗಳು ಬೆಲೆ ಇಳಿಕೆ ಮಾಡಬೇಕು ಅಂದ್ರೆ ಹೇಗೆ..? ಕೇಂದ್ರದಲ್ಲಿ ಬೆಲೆ ಹೆಚ್ಚಿರುವಾಗ ರಾಜ್ಯಗಳಲ್ಲಿ ಹೇಗೆ ಇಳಿಕೆ ಮಾಡಬೇಕೆಂದು ಪ್ರಶ್ನೆ ಮಾಡಿದ್ದಾರೆ. ನಿಮ್ಮ ಆದಾಯ ಎಷ್ಟಿದೆ ಎಂದು ನಿಮಗೆ ತಿಳಿದಿದ್ಯಾ..? ಏಕಪಕ್ಷೀಯ ವಿಚಾರಗಳನ್ನು ಹೇಳುವ ಮೂಲಕ ಜನರನ್ನು ದಾರಿ ತಪ್ಪಿಸಲಾಗುತ್ತಿದೆ ಎಂದು ಪ್ರಧಾನಿ ಮೋದಿ ವಿರುದ್ಧ ಬ್ಯಾನರ್ಜಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಆಡಳಿತವಿರುವ 5 ರಾಜ್ಯಗಳನ್ನು ಮೆಚ್ಚಿದ್ದೀರಿ ಮತ್ತು ಅವುಗಳಿಗೆ (ಕೇಂದ್ರದಿಂದ) ಸಾಕಷ್ಟು ಹಣವನ್ನು ಬಿಡಿಗಡೆ ಮಾಡಿದ್ದೀರಿ. ನಮಗಿಂತ ಅವರಿಗೆ 50% ಹೆಚ್ಚಿನ ಹಣ ನೀಡುತ್ತಿದ್ದೀರಿ. ಹಾಗಾಗಿ ಅವರು ರೂ. 4,000 -5,000 ಕೋಟಿ ಅವರು ಬಿಟ್ಟುಕೊಡುವುದು ದೊಡ್ಡ ವಿಷಯವಲ್ಲ. ಕೇಂದ್ರದಿಂದ ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ರೂ. 40,000 ಕೋಟಿ ಹಣ ನೀಡಲಾಗುತ್ತಿದೆ ಎಂದು ದೀದಿ ಹೇಳಿದ್ದಾರೆ. ಪ.ಬಂಗಾಳದಲ್ಲಿ ಪೆಟ್ರೋಲ್ ಮೇಲಿನ 1 ರೂಪಾಯಿ ಸಬ್ಸಿಡಿಯಿಂದಾಗಿ ಕಳೆದ ಮೂರು ವರ್ಷಗಳಲ್ಲಿ ತಮ್ಮ ಸರ್ಕಾರವು 1,500 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ ಎಂದಿದ್ದಾರೆ.
ನಮ್ಮ ನಷ್ಟವನ್ನು ನೀವು ಗುರುತಿಸಬೇಕು. ಕೇಂದ್ರದಿಂದ ನಮಗೆ 97,000 ಕೋಟಿ ರೂಪಾಯಿ ಬರಬೇಕಿದೆ. ಪ್ರಸ್ತುತ, ಪೆಟ್ರೋಲ್ ಮೇಲಿನ ಕೇಂದ್ರದ ತೆರಿಗೆ (25%) ಬಂಗಾಳ ಸರ್ಕಾರಕ್ಕಿಂತ ಹೆಚ್ಚಾಗಿದೆ ಎಂದು ಚಾಟಿ ಬೀಸಿದ್ದಾರೆ. ರಾಜ್ಯ ಸರ್ಕಾರಗಳಿಗೆ ಹೊರೆಯಾಗದಂತೆ ನೋಡಿಕೊಳ್ಳುವುದು ಕೇಂದ್ರದ ಕರ್ತವ್ಯ. ಈ ಬಗ್ಗೆ ಪ್ರಧಾನಿಯವರು ಗಮನ ಹರಿಸಬೇಕೆಂದು ಮನವಿ ಮಾಡುತ್ತೇನೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.