ಬಿ ಎಸ್ ಎಫ್ ವಿರುದ್ಧ ಜನರನ್ನು ಪ್ರಚೋದಿಸುತ್ತಿರುವ ಮಮತಾ ಬ್ಯಾನರ್ಜಿ, ಮೋದಿ ವಿರೋಧಿಸುವ ಭರದಲ್ಲಿ ಇದೇನಿದು ದೇಶಘಾತುಕ ನಡೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತೀಯ ಗಡಿ ರಕ್ಷಣಾ ಪಡೆ( ಬಿಎಸ್‌ಎಫ್‌ )ಗೆ ಅಂತರಾಷ್ಟ್ರೀಯ ಗಡಿಯಿಂದ ರಾಜ್ಯದೊಳಗೆ ಬರಲು ಬಿಡಬೇಡಿ ಎನ್ನುವ ಮೂಲಕ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೊಸ ವಿವಾದವನ್ನು ಸೃಷ್ಟಿಸಿದ್ದಾರೆ. ರಾಜ್ಯದ ಹಿರಿಯ ಪೋಲೀಸ್‌ ಅಧಿಕಾರಿಗಳೊಂದಿಗೆ ವರ್ಚುವಲ್‌ ಸಭೆ ನಡೆಸಿದ ಅವರು ಗಡಿ ರಕ್ಷಣಾ ಪಡೆಗಳ ಕಾರ್ಯ ದಕ್ಷತೆಯನ್ನೇ ಪ್ರಶ್ನಿಸಿದ್ದಾರೆ.

“ಬಿಎಸ್‌ಎಫ್‌ ಅಂತರಾಷ್ಟ್ರೀಯ ಗಡಿಯಿಂದ 50 ಕಿ.ಮಿ. ದಾಟಿ ಬರದಂತೆ ನೋಡಿಕೊಳ್ಳಿ, ಅವರು ಹಳ್ಳಿಗಳಿಗೆ ನುಗ್ಗಿ ಜನರೊಂದಿಗೆ ಅನುಚಿತವಾಗಿ ವರ್ತಿಸಿ ದಾಂಧಲೆ ಮಾಡುತ್ತಾರೆ. ಜನರನ್ನು ಹೊಡೆದು ಅವರನ್ನು ಗಡಿಯಾಚೆ ಎಸೆಯುತ್ತಾರೆ. ಅಪರಾಧಿಗಳನ್ನುಕಂಡುಹಿಡಿಯುವ ನೆಪದಲ್ಲಿ ಹಳ್ಳಿಗಳೊಳಗೆ ನುಗ್ಗಿ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಾರೆ. ಹಾಗಾಗಿ ಅವರು ಗಡಿಯಿಂದ 50 ಕಿ.ಮಿ ದಾಟಿ ಒಳಗೆಬರದಂತೆ ತಡೆಯಿರಿ, ರಾಜ್ಯದ ಒಳಭಾಗಗಳಲ್ಲಿ ಕಾರ್ಯಾಚರಣೆ ಮಾಡುವಾಗ ಸ್ಥಳೀಯ ಪೋಲೀಸರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಾಚರಣೆ ನಡೆಸಲು ಹೇಳಿ” ಎಂದು ಭಾರತೀಯ ಗಡಿ ರಕ್ಷಣಾ ಪಡೆಯ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ಸಂಪೂರ್ಣವಾಗಿ ಕೇಂದ್ರ ಗೃಹಸಚಿವಾಲಯದ ಅಡಿಯಲ್ಲಿ ಬರುವ ಬಿಎಸ್‌ಎಫ್‌ ಕೇಂದ್ರ ಸಶಸ್ತ್ರ ಪಡೆಗಳ ಭಾಗವಾಗಿದೆ. ಶಾಂತಿಯ ಸಮಯದಲ್ಲಿ ಪಾಕಿಸ್ಥಾನ ಮತ್ತು ಬಾಂಗ್ಲಾದೇಶ ದೊಂದಿಗಿನ ಗಡಿ ಕಾಯುವ ಜವಾಬ್ದಾರಿ ಬಿಎಸ್‌ಎಫ್ ನದ್ದು.ವಿಐಪಿ ಭದ್ರತೆ, ಚುನಾವಣಾ ಮೇಲ್ವಿಚಾರಣೆ, ಪ್ರಮುಖ ಸ್ಥಾನಗಳ ಭದ್ರತೆ ಮತ್ತು ಕೌಂಟರ್ ನಕ್ಸಲ್ ಕಾರ್ಯಾಚರಣೆಗಳನ್ನು ನಡೆಸುವ ಅಧಿಕಾರ ಬಿಎಸ್‌ಎಫ್ ಗೆ ಇದೆ. ಇದರೊಂದಿಗೆ ಶಸ್ತ್ರಾಸ್ತ್ರ ಸಾಗಣೆ ಮಾದಕ ವಸ್ತುಗಳ ಕಳ್ಳಸಾಗಣೆ, ಅಕ್ರಮ ನುಸುಳುವಿಕೆ ತಡೆಗಟ್ಟುವುದು ಮುಂತಾದ ಕಾರ್ಯಗಳನ್ನೂ ನಿರ್ವಹಿಸುತ್ತದೆ. ಈ ಪ್ರಕರಣಗಳಲ್ಲಿ ಅಪರಾಧಿಗಳನ್ನು ಬಂಧಿಸುವ ವಿಷಯಕ್ಕೆ ರಾಜ್ಯ ಪೋಲೀಸ್‌ ಮತ್ತೆ ಬಿಎಸ್‌ಎಫ್‌ ನಡುವೆ ಆಗಾಗ ತಿಕ್ಕಾಟಗಳು ನಡೆಯುತ್ತಿರುತ್ತದೆ.

ಗಡಿಯಲ್ಲಿ ಅಪರಾಧ ಎಸಗಿದ ಆರೋಪಿಗಳು ರಾಜ್ಯಗಳ ಒಳಬಂದು ಅವಿತುಕೊಳ್ಳುತ್ತಾರೆ. ಅವರನ್ನು ಹುಡುಕಿ ಬಂಧಿಸುವ ವಿಚಾರದಲ್ಲಿ ಎರಡೂ ಪಡೆಗಳ ನಡುವೆ ಘರ್ಷಣೆಗಳು ಏರ್ಪಡುತ್ತವೆ. ಆಯಾ ರಾಜ್ಯದಲ್ಲಿ ಆಡಳಿತ ನಡೆಸುವವರ ಆದೇಶದಂತೆ ರಾಜ್ಯ ಪೋಲೀಸ್‌ ಪಡೆಗಳು ಕಾರ್ಯನಿರ್ವಹಿಸುತ್ತವೆ, ಆದರೆ ಬಿಎಸ್‌ಎಫ್‌ ಕೇಂದ್ರ ಗೃಹಸಚಿವಾಲಯದ ಆಣತಿಯಂತೆ ಕೆಲಸ ಮಾಡುತ್ತದೆ. ರಾಜ್ಯಗಳು ಅವರನ್ನು ಗಡಿ ರಕ್ಷಕರಂತೆ ನೋಡದೇ ಕೇಂದ್ರಸರ್ಕಾರದ ಪ್ರತಿನಿಧಿಗಳಂತೆ ನೋಡುವುದು ಈ ಸಮಸ್ಯೆಗಳ ಮೂಲ. ಅದರಲ್ಲೂ ವಿಶೇಷವಾಗಿ ಪಶ್ಚಿಮ ಬಂಗಾಳ, ಪಂಜಾಬ್‌ ಮತ್ತು ಅಸ್ಸಾಂಗಳಲ್ಲಿ ಈ ಸಮಸ್ಯೆ ಹೆಚ್ಚು. ಅಲ್ಲಿ ಕೆಲವೊಂದು ರಾಜ್ಯದ ಕುಮ್ಮಕ್ಕಿರುವ ಅಪರಾಧಗಳಿಗೆ ಬಿಎಸ್‌ಎಫ್‌ ಸೊಪ್ಪು ಹಾಕುವುದಿಲ್ಲ. ಹಾಗಾಗಿ ರಾಜ್ಯ ಸರ್ಕಾರಗಳು ಈ ಪಡೆಗಳನ್ನು ಆಗಾಗ ಬೈಯ್ಯುವುದು ತೆಗಳುವುದು ಮಾಡುತ್ತಿರುತ್ತಾರೆ.

ಪ್ರಸ್ತುತ ಮಮತಾ ಬ್ಯಾನರ್ಜಿಯವರ ಈ ಹೇಳಿಕೆಗೆ ಕಾರಣವಿಲ್ಲವೆಂದಲ್ಲ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗಡಿ ಭಾಗದಲ್ಲಿನ ಅಕ್ರಮಗಳನ್ನು ತಡೆಯಲು ಕೆಲವು ದಿಟ್ಟ ಕ್ರಮಗಳನ್ನು ತೆಗೆದುಕೊಂಡಿದೆ. 2021 ಅಕ್ಟೋಬರ್‌ ನಲ್ಲಿ ವಿಶೇಷ ಆದೇಶವನ್ನು ಹೊರಡಿಸಿ ಪಶ್ಚಿಮ ಬಂಗಾಳ, ಪಂಜಾಬ್‌ ಮತ್ತು ಅಸ್ಸಾಂಗಳಲ್ಲಿ ಗಡಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಲು ಅಂತರಾಷ್ಟ್ರೀಯ ಗಡಿಯಿಂದ 50 ಕಿ.ಮಿವೆರೆಗೆ ಒಳಗೆ ಬರಲು ಅನುಮತಿ ನೀಡಿದೆ. ಈ ಹಿಂದೆ ಈ ವ್ಯಾಪ್ತಿಯು 15 ಕಿ.ಮಿಗೆ ಸೀಮಿತವಾಗಿತ್ತು. ಈ ಆದೇಶದಿಂದ ಮೇಲಿನ ಮೂರು ರಾಜ್ಯಗಳಲ್ಲಿ ರಾಜಕೀಯ ತಿಕ್ಕಾಟ ಶುರುವಾಯಿತು.

ಇದನ್ನು ವಿರೋಧಿಸುವ ಭರದಲ್ಲಿ ದೀದಿ ಈಗ ಭದ್ರತಾ ಪಡೆಗಳ ಕಾರ್ಯದಕ್ಷತೆಯ ಬಗ್ಗೆಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಭದ್ರತಾ ಪಡೆಗಳು ಇಲ್ಲವೆಂದಾರೆ ಅದರಲ್ಲೂ ಬಾಂಗ್ಲಾ ಗಡಿಯಲ್ಲಿರುವ ರಾಜ್ಯದಲ್ಲಿ ತಾಂಡವವಾಡುವ ಅಪರಾಧ ಕೃತ್ಯಗಳಿಗೆ ಮೂಗುದಾರ ಹಾಕಲು ಕಷ್ಟಸಾಧ್ಯ ಎಂಬುದು ವಾಸ್ತವ. ವಾದಗಳೇನೇ ಇರಲಿ, ರಾಜಕೀಯ ಉದ್ದೇಶವೊಂದನ್ನು ಪೂರೈಸಿಕೊಳ್ಳುವ ಸಲುವಾಗಿ ಹಗಲುರಾತ್ರಿಯೆನ್ನದೇ, ಬಿಸಿಲು-ಮಳೆ-ಛಳಿ-ಗಾಳಿಯ ಲೆಕ್ಕವಿಲ್ಲದೇ ಗಡಿಕಾಯುವ ಭದ್ರತಾಪಡೆಗಳಿಗೆ ಅವಮಾನ ಸಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!