ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ರೈತರ ಹಿತದೃಷ್ಟಿಯಿಂದ, ಉತ್ತಮ ಬೆಳೆ ಬೆಳೆಯಲು ಅನುಕೂಲವಾಗುವಂತೆ 2024-25ನೇ ಸಾಲಿನಲ್ಲಿ ಅಲ್ಪಾವಧಿ ಕೃಷಿ ಸಾಲದ ಮಿತಿ ಹೆಚ್ಚಿಸುವಂತೆ ನಬಾರ್ಡ್ ಹಾಗೂ ಆರ್‌ಬಿಐಗೆ ನಿರ್ದೇಶನ ನೀಡುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಸಿಎಂ ಸಿದ್ದರಾಮಯ್ಯ ಮನವಿ ಪತ್ರ ಸಲ್ಲಿಸಿದ್ದಾರೆ.
“2024-25ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರ 35 ಲಕ್ಷ ರೈತರಿಗೆ 25 ಸಾವಿರ ಕೋಟಿ ರೂ ಅಲ್ಪಾವಧಿ ಕೃಷಿ ಸಾಲ ವಿತರಿಸುವ ಗುರಿ ಹೊಂದಿದೆ. 2023-24ನೇ ಹಣಕಾಸು ವರ್ಷದಲ್ಲಿ ಅಲ್ಪಾವಧಿ ಸಹಕಾರಿ ಸಾಲ ವ್ಯವಸ್ಥೆಯಡಿ ಕರ್ನಾಟಕದಲ್ಲಿ ರೂ. 22,902 ಕೋಟಿ ಅಲ್ಪಾವಧಿ ಕೃಷಿ ಸಾಲವನ್ನು ವಿತರಿಸಲಾಗಿದೆ. 2024-25ನೇ ಸಾಲಿನಲ್ಲಿ ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಅಲ್ಪಾವಧಿ ಸಹಕಾರಿ ಸಾಲ ವ್ಯವಸ್ಥೆಯಡಿ 9,162 ಕೋಟಿ ರೂ ಕೃಷಿ ಸಾಲ ಮಿತಿಗೆ ಅನುಮೋದನೆ ನೀಡುವಂತೆ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್ ನಬಾರ್ಡ್‌ಗೆ ಪ್ರಸ್ತಾವನೆ ಸಲ್ಲಿಸಿತ್ತು” ಎಂದು ಮನವಿಯಲ್ಲಿ ತಿಳಿಸಿದ್ದಾರೆ.
“ಕಳೆದ ಐದು ವರ್ಷಗಳ ಅವಧಿಯಲ್ಲಿ ನಬಾರ್ಡ್ ಕರ್ನಾಟಕ ರಾಜ್ಯಕ್ಕೆ ಅನುಮೋದಿಸಿರುವ ಕೃಷಿ ಸಾಲದ ಮಿತಿಯ ವಿವರವನ್ನು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಅದರಂತೆ 2019-20ರಲ್ಲಿ 4,200 ಕೋಟಿ ರೂ. ಮೊತ್ತ ಮಂಜೂರು ಮಾಡಲಾಗಿತ್ತು. ಸುಮಾರು15% ಮಿತಿ ಹೆಚ್ಚಿಸಿತ್ತು. 2020-21 ಸಾಲಿನಲ್ಲಿ 5,500 ಕೋಟಿ ರೂ. ಮಂಜೂರು ಮಾಡಲಾಗಿತ್ತು. 27% ಮಿತಿ ಹೆಚ್ಚಿಸಿತ್ತು. 2021-22 ಸಾಲಿನಲ್ಲಿ 5,483 ಕೋಟಿ ರೂ. ಸಾಲವನ್ನು ಮಂಜೂರು ಮಾಡಲಾಗಿದ್ದು, 1% ಕಡಿತವಾಗಿತ್ತು. 2022-23 ಸಾಲಿನಲ್ಲಿ 5,550 ಕೋಟಿ ರೂ. ಸಾಲದ ಮೊತ್ತು ಮಂಜೂರು ಮಾಡಿತ್ತು. 1% ಮಿತಿ ಹೆಚ್ಚಿಸಿತ್ತು. 2023-24 ಸಾಲಿನಲ್ಲಿ 5600 ಕೋಟಿ ರೂ. ಮಂಜೂರು ಮಾಡಿದ್ದು, 1% ಮಿತಿ ವೃದ್ಧಿಯಾಗಿತ್ತು. 2024-25 ಸಾಲಿನಲ್ಲಿ 2,340 ಕೋಟಿ ರೂ. ಮಂಜೂರು ಮಾಡಲಾಗಿದೆ. ಆ ಮೂಲಕ 58% ಕಡಿತ ಮಾಡಿದೆ” ಎಂದು ವಿವರಿಸಿದ್ದಾರೆ.