ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮವನ್ನು ಸಿಎಂ ಗಂಭೀರವಾಗಿ ಪರಿಗಣಿಸಬೇಕು: ಯತ್ನಾಳ್

ಹೊಸದಿಗಂತ ವರದಿ ವಿಜಯಪುರ:

ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮ ಪ್ರಕರಣವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ಪಿಎಸ್‌ಐ ನೇಮಕಾತಿ ಪರೀಕ್ಷಾ ಅಕ್ರಮ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಅಕ್ರಮವಾಗಿದ್ದು ನಿಜ ಇದರಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ ಎಲ್ಲರೂ ಇದ್ದಾರೆ ಎಂದರು.

ಈ ಪ್ರಕರಣವನ್ನು ಮುಚ್ಚಿ ಹಾಕೋಕೆ ಆಗುವುದಿಲ್ಲ, ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ನಮ್ಮ ಸರ್ಕಾರ ಇದೆ ಅಂತಾ ನಾನು ಸಮರ್ಥನೆ ಮಾಡಿಕೊಳ್ಳೋದಿಲ್ಲ ಎಂದರು. ಎಲ್ಲ ಕಳ್ಳರಿದ್ದಾರೆ, ಇಲ್ಲಿ ಮೂಲ ಬಿಜೆಪಿಯವರಿಲ್ಲ. ಡಿಕೆಶಿ ಜೊತೆಗೆ ಈ ಕಳ್ಳರ ಫೋಟೋ ಇವೆ. ಅವರು ಎಲ್ಲ ಕಡೆಗೂ ತಿರುಗಾಡುತ್ತಾರೆ ಪಾರ್ಟಿಯವರು ಅವರನ್ನೆ ನಂಬುತ್ತಾರೆ. ಕಳ್ಳರನ್ನ ನಂಬಿದಕ್ಕೆ ಇಂಥ ಹಗರಣ ಆಗುತ್ತಿವೆ ಎಂದರು.

ದಕ್ಷ ಪೊಲೀಸ್ ಅಧಿಕಾರಿಗಳ ಕೈಗೆ ತನಿಖೆಯನ್ನ ಒಪ್ಪಿಸಲಿ ಡಿಸಿ- ಎಸ್ಪಿಗಳ ನೇಮಕಕ್ಕೆ ಮೊದಲು ಹಣ ತೆಗೆದುಕೊಳ್ತಿರಲಿಲ್ಲ. ಈಗ ಡಿಸಿ-ಎಸ್ಪಿ ಹುದ್ದೆಗಳನ್ನ ನಿಲಾವ್ (ಹರಾಜು)ಗೆ ಇಟ್ಟಿದ್ದಾರೆ ಎಂದರು.

ಪಿಎಸ್‌ಐ ಮರು ಪರೀಕ್ಷೆ ವಿಚಾರ ಕುರಿತು ಮಾತನಾಡಿ, ಮರುಪರೀಕ್ಷೆ ನಡೆಸುವುದು ಸ್ವಾಗತಾರ್ಹ. ಅರ್ಹರಿಗೆ 10 ಸಾರಿ ಪರೀಕ್ಷೆ ನಡೆಸಿದರು ಅವರು ಬೇಜಾರಾಗಲ್ಲ. ಮೆರಿಟ್ ಇದ್ದವರಿಗೆ ಮರು ಪರೀಕ್ಷೆ ಸಮಸ್ಯೆ ಆಗಲ್ಲ ಎಂದರು. ಬ್ಲೂಟೂತ್ ಇಟ್ಟುಕೊಂಡು ಪರೀಕ್ಷೆ ಬರೆದವರಿಗೆ ತೊಂದರೆ ಆಗುತ್ತೆ, ತೊಂದರೆ ಆಗಬೇಕು ಎಂದರು.

ಸಿಎಂ ದೆಹಲಿ ಪ್ರವಾಸ, ಸಂಪುಟ ವಿಸ್ತರಣೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಸಂಪುಟ ವಿಸ್ತರಣೆಯೋ, ಪುನರ್ ರಚನೆಯೋ ಗೊತ್ತಿಲ್ಲ. ಪಾರ್ಟಿ ಹೈಕಮಾಂಡ್ ಏನು ನಿರ್ಧಾರ ಮಾಡುತ್ತೋ ಎಲ್ಲರೂ ಒಪ್ಪಬೇಕಾಗುತ್ತೆ. ರಾಜ್ಯದಲ್ಲಿ ಸಚಿವ ಸಂಪುಟ ಬದಲಾವಣೆಗೆ ಹೈಕಮಾಂಡ್ ತೀರ್ಮಾನಿಸಿದೆ. ಶೀಘ್ರದಲ್ಲೆ ಸಂಪುಟ ವಿಸ್ತರಣೆ ಆಗುತ್ತದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!