ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಬಿಳಿನೆಲೆ ಕೈಕಂಬ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಸವಣ್ಣನವರ ಬಗ್ಗೆ ಮತ್ತು ಅವರ ಜೀವನದ ಬಗ್ಗೆ ಜ್ಞಾನ ತಿಳಿಸಿದರು.
ಬೆಳಗಾವಿ ಅಧಿವೇಶನದ ಬಿಡುವಿನ ಸಮಯದಲ್ಲಿ ಮಕ್ಕಳಿಗೆ ಬೋಧನೆ ಮಾಡಿ ಮುಖ್ಯಮಂತ್ರಿಗಳು ಮೇಸ್ಟ್ರಾದರು. ತನ್ನ ಮಾತನ್ನು ತುಂಬಾ ಆಸಕ್ತಿಯಿಂದ ಕೇಳುತ್ತಿದ್ದ ವಿದ್ಯಾರ್ಥಿಗಳಿಗೆ ಜೀವನ ಮೌಲ್ಯಗಳನ್ನು ಒಳಗೊಂಡ ಉತ್ತಮ ಜ್ಞಾನವನ್ನು ಮುಖ್ಯಮಂತ್ರಿಗಳು ನೀಡಿದರು.ತುಂಬು ಸರಳತೆಯಿಂದ ಮಕ್ಕಳೊಂದಿಗೆ ಮಕ್ಕಳಂತೆ ಸಿ.ಎಂ ಬೆರೆತರು.
ಬೆಳಗಾವಿ ಅಧಿವೇಶನದಲ್ಲಿ ಭಾಗಿ
ಬಿಳಿನೆಲೆ ಕೈಕಂಬ ಶಾಲೆಯ ವಿದ್ಯಾರ್ಥಿಗಳಿಗೆ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರ ಶಿಫಾರಸಿನಂತೆ ಸೋಮವಾರ ಬೆಳಗಾವಿ ಅಧಿವೇಶನದಲ್ಲಿ ಭಾಗವಹಿಸಲು ಅವಕಾಶ ದೊರಕಿತ್ತು.ಈ ಕಾರಣದಿಂದ ಮುಖ್ಯಶಿಕ್ಷಕಿ ಪವಿತ್ರಾ.ಎ ಮತ್ತು ಎಸ್‌ಡಿಎಂಸಿ ಅಧ್ಯಕ್ಷ ನವೀನ್ ನಡುತೋಟ ಅವರ ನೇತೃತ್ವದಲ್ಲಿ ಶಾಲೆಯ ೩ನೇ ತರಗತಿಯಿಂದ ೮ನೇ ತರಗತಿಯ ವಿದ್ಯಾರ್ಥಿಗಳು ಬೆಳಗಾವಿ ಅಧಿವೇಶನಕ್ಕೆ ಪ್ರವಾಸ ತೆರಳಿದ್ದರು. ಸೋಮವಾರ ಬೆಳಗಾವಿಯ ಅಧಿವೇಶನವನ್ನು ವಿದ್ಯಾರ್ಥಿಗಳು ವೀಕ್ಷಿಸಿದರು.
ಮುಖ್ಯಮಂತ್ರಿಗಳಿಂದ ಬೋಧನೆ
ಅಧಿವೇಶನದ ಬಿಡುವಿನ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ವಿದ್ಯಾರ್ಥಿಗಳು ಭೇಟಿಯಾದರು.ಅಲ್ಲದೆ ಮಕ್ಕಳು ಮನಬಿಚ್ಚಿ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದರು.ಸರಳ ವ್ಯಕ್ತಿತ್ವದ ಮುಖ್ಯಮಂತ್ರಿಗಳು ಗ್ರಾಮೀಣ ಸರಕಾರಿ ಶಾಲಾ ವಿದ್ಯಾರ್ಥಿಗಳ ಮಾತನ್ನು ಕೇಳಿ ಸಂತುಷ್ಠರಾದರು. ಅಲ್ಲಿದ್ದ ಅನುಭವ ಮಂಟಪದ ಚಿತ್ರಕಲೆಯನ್ನು ತೋರಿಸಿ ಬಸವಣ್ಣನವರ ಬಗ್ಗೆ ಮತ್ತು ಅನುಭವ ಮಂಟಪದ ಬಗ್ಗೆ ವಿವರಿಸಿದರು.
ಕಲಿತು ಮೊದಲು ಮಾನವರಾಗಿ
ಬಸವಣ್ಣನವರ ಜೀವನವು ನಮಗೆಲ್ಲರಿಗೂ ಮಾದರಿ.ಸ್ತ್ರೀ-ಪುರುಷರು ಸಮಾನರು, ಭೇದ ಭಾವ ಮಾಡಬಾರದು, ಜಾತಿ ಬೇಧ ಮಾಡಬಾರದು, ನಾವೆಲ್ಲರೂ ಒಂದೇ ಎಂಬ ಭಾವನೆ ನಮ್ಮಲ್ಲಿ ಮೂಡಿ ಬರಬೇಕು. ಎಂದು ಬಸವಣ್ಣನವರು ಹೇಳಿದ ಈ ಮಾತುಗಳನ್ನು ಎಂದಿಗೂ ನಾವು ಮರೆಯಬಾರದು.ನೀವೆಲ್ಲರೂ ಚೆನ್ನಾಗಿ ಕಲಿತು ಮೊದಲು ಮಾನವರಾಗಬೇಕು ಎಂದು ಹೇಳಿದರು.
ಮೇಸ್ಟ್ರಾದ ಸಿಎಂ
ಬಸವಣ್ಣನವರ ಬಗ್ಗೆ ಒಂದೊಂದು ವಿಚಾರಗಳನ್ನು ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಮುಖ್ಯಮಂತ್ರಿಗಳು ಬೋಧನೆ ಮಾಡಿದರು.ಅಲ್ಲದೆ ಮುಖ್ಯಮಂತ್ರಿಗಳು ಹೇಳಿದ ನುಡಿಗಳನ್ನು ಮಕ್ಕಳು ಪುನರಾವರ್ತಿಸುತ್ತಿದ್ದರು.ಗ್ರಾಮೀಣ ವಿದ್ಯಾರ್ಥಿಗಳು ತುಂಬಾ ಆಸಕ್ತಿಯಿಂದ ಮುಖ್ಯಮಂತ್ರಿಗಳ ಮಾತನ್ನು ಕೇಳಿದರು.ಮಕ್ಕಳ ಆಸಕ್ತಿಯನ್ನು ಕಂಡು ಮುಖ್ಯಮಂತ್ರಿಗಳು ಅವರನ್ನು ಶ್ಲಾಘಿಸಿದರು.
ಮುಖ್ಯಮಂತ್ರಿಗಳಿಂದ ಶ್ಲಾಘನೆ
ಭಾರತದ ಸಂವಿಧಾನದ ಪ್ರಸ್ತಾವನೆಯನ್ನು ಈ ಸಂದರ್ಭ ವಿದ್ಯಾರ್ಥಿಗಳು ಹೇಳಿದರು.ಪುಸ್ತಕ ನೋಡದೆ ನಿರರ್ಗಳವಾಗಿ ಒಂದಿಂಚು ತಪ್ಪಿಲ್ಲದೆ ಸಂವಿಧಾನದ ಪ್ರಸ್ತಾವನೆಯನ್ನು ಎಲ್ಲಾ ವಿದ್ಯಾರ್ಥಿಗಳು ಒಟ್ಟಾಗಿ ಉಚ್ಚರಿಸಿದರು. ವಿದ್ಯಾರ್ಥಿಗಳ ಈ ಜ್ಞಾನಕ್ಕೆ ಮುಖ್ಯಮಂತ್ರಿಗಳು ಚಪ್ಪಾಳೆ ತಟ್ಟಿ ಶ್ಲಾಘಿಸಿದರು.ಅಲ್ಲದೆ ಗ್ರಾಮೀಣ ಸರಕಾರಿ ಶಾಲೆಯ ವಿದ್ಯಾರ್ಥಿಗಳ ಜ್ಞಾನವನ್ನು ಅಭಿನಂದಿಸಿದರು.
ಈ ಸಂದರ್ಭ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಮತ್ತು ಇತರ ಸಚಿವರು ಉಪಸ್ಥಿತರಿದ್ದರು.