October 16, 2026
Friday, October 16, 2026
spot_img

ನೀಟ್ ಪರೀಕ್ಷೆ ರದ್ದುಗೊಳಿಸಿ ಸಿಇಟಿಗೆ ಅವಕಾಶ ಕೊಡಿ: ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಆಗ್ರಹ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ನೀಟ್ ಪರೀಕ್ಷೆ ಅಕ್ರಮವನ್ನು ಖಂಡಿಸಿ ಯುವ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜಧಾನಿಯ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವೈದ್ಯಕೀಯ ಶಿಕ್ಷಣದ ಆಕಾಂಕ್ಷಿಗಳಿಗೆ ಈ ಹಿಂದೆ ಇದ್ದಂತೆ ರಾಜ್ಯ ಮಟ್ಟದಲ್ಲೇ ಸಿಇಟಿ ಪರೀಕ್ಷೆ ನಡೆಸಲು ಸ್ವತಂತ್ರ ಅವಕಾಶ ನೀಡಬೇಕು ಎಂದು ಕೇಂದ್ರಕ್ಕೆ ಆಗ್ರಹಿಸಿದರು.

ಕೇಂದ್ರದ ಸದ್ಯದ ಆಡಳಿತದಲ್ಲಿ ಒಕ್ಕೂಟ ವ್ಯವಸ್ಥೆಯ ಆಶಯಗಳು ಸಂಪೂರ್ಣವಾಗಿ ಹಳಿತಪ್ಪಿವೆ ಎಂದು ಆತಂಕ ವ್ಯಕ್ತಪಡಿಸಿದ ಸಿಎಂ, ಕೇಂದ್ರ ಸರ್ಕಾರವು ದೇಶಾದ್ಯಂತ ಸಿಇಟಿ ಮಾದರಿಯ ಪರೀಕ್ಷಾ ವ್ಯವಸ್ಥೆಯನ್ನು ಜಾರಿಗೆ ತರಬೇಕು, ಇಲ್ಲವೇ ರಾಜ್ಯಗಳಿಗೇ ಸ್ವಾಯತ್ತತೆ ಬಿಟ್ಟುಕೊಡಬೇಕು ಎಂದರು.

ಇದೇ ವೇಳೆ ರಾಜ್ಯ ಬಿಜೆಪಿ ನಾಯಕರ ವಿರುದ್ಧವೂ ಕಿಡಿಕಾರಿದ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ಆಡಳಿತಾವಧಿಯಲ್ಲೇ ಪಿಎಸ್‌ಐ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಇತಿಹಾಸದಲ್ಲೇ ಮೊದಲ ಬಾರಿಗೆ ಎಡಿಜಿಪಿ ಮಟ್ಟದ ಉನ್ನತ ಅಧಿಕಾರಿಯೊಬ್ಬರು ಜೈಲು ಪಾಲಾಗಿದ್ದು ಬಿಜೆಪಿ ಸರ್ಕಾರದ ಭ್ರಷ್ಟಾಚಾರಕ್ಕೆ ಸಾಕ್ಷಿ. ನಿರಂತರವಾಗಿ ನಡೆಯುತ್ತಿರುವ ಈ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರೇ ನೇರ ಜವಾಬ್ದಾರಿ ಹೊರಬೇಕು ಎಂದು ಆರೋಪಿಸಿದರು.

Must Read