ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಬೆಂಗಳೂರಿನಲ್ಲಿ ದಿನವಿಡೀ ಮುಖ್ಯಮಂತ್ರಿ ಸಿದ್ದರಾಮಯ್ಯ ಜನತಾ ದರುಶನ ನಡೆಯಲಿದ್ದು, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ.
ಬೆಳಗ್ಗೆ 9.30ಕ್ಕೆ ಗೃಹ ಕಚೇರಿ ಕೃಷ್ಣಾದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಯಲಿದ್ದು, ಸಿಎಂ ಸಿದ್ದರಾಮಯ್ಯ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ ಹಾಗೂ ಸ್ಥಳದಲ್ಲೇ ಪರಿಹಾರ ಕಲ್ಪಿಸಿ ಕೊಡಲು ಸೂಚಿಸಲಿದ್ದಾರೆ.
ಜನಸಾಮಾನ್ಯರ ಸಮಸ್ಯೆ, ಅಹವಾಲುಗಳಿಗೆ ಸ್ಥಳೀಯ ಮಟ್ಟದಲ್ಲೇ ಪರಿಹಾರ ದೊರಕಿಸಿಕೊಡುವ ಉದ್ದೇಶದಿಂದ ಮುಖ್ಯಮಂತ್ರಿಗಳ ನಿರ್ದೇಶನದಂತೆ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಕಳೆದ ತಿಂಗಳಿಂದ ಜಿಲ್ಲಾಮಟ್ಟದಲ್ಲಿ ಜನತಾದರ್ಶನ ಆರಂಭಿಸಿದ್ದಾರೆ.
ಜನತಾ ದರ್ಶನದಲ್ಲಿ ಅಹವಾಲು ಸಲ್ಲಿಸಲು ಆಗಮಿಸುವ ಜನರು ತಮ್ಮ ಗುರುತಿನ ಚೀಟಿಯಾದ ಆಧಾರ್ ಕಾರ್ಡ್ ಅಥವಾ ಪಡಿತರ ಚೀಟಿ ತರಲು ಕೋರಲಾಗಿದೆ. ಇದರಿಂದ ತಂತ್ರಾಂಶದಲ್ಲಿ ದಾಖಲಿಸುವ ಅರ್ಜಿಗಳ ಸ್ಥಿತಿಗತಿಯನ್ನು ಪತ್ತೆಹಚ್ಚಲು ಅನುಕೂಲವಾಗಲಿದೆ.
ಸಹಸ್ರಾರು ಸಂಖ್ಯೆಯಲ್ಲಿ ಜನರು ತಮ್ಮ ಸಮಸ್ಯೆಗಳನ್ನ ಹೊತ್ತು ಬರುವ ಸಾಧ್ಯತೆ ಇದೆ. ಹೀಗಾಗಿ ಜನರ ಅನುಕೂಲಕ್ಕಾಗಿ 20 ಕೌಂಟರ್ ವ್ಯವಸ್ಥೆ ಮಾಡಲಾಗಿದೆ. ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ಎರಡು ಪ್ರತ್ಯೇಕ ಕೌಂಟರ್ಗಳು ಇರಲಿವೆ. ಎಲ್ಲಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಆಯುಕ್ತರು ಖುದ್ದು ಹಾಜರಿರುವಂತೆ ಸೂಚಿಸಲಾಗಿದೆ. 300ಕ್ಕೂ ಹೆಚ್ಚು ಅಧಿಕಾರಿಗಳು ಸ್ಥಳದಲ್ಲಿ ಇರಲಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸುವ ಯತ್ನ ಮಾಡಲಿದ್ದಾರೆ. ಡಿಸಿಪಿ, ಮೂವರು ಎಸಿಪಿ, 19 ಇನ್ಸ್ಪೆಕ್ಟರ್ ಸೇರಿ 550ಕ್ಕೂ ಹೆಚ್ಚು ಪೊಲೀಸರನ್ನ ಭದ್ರತೆಗೆ ನಿಯೋಜಿಸಲಾಗಿದೆ.