ಸುಳ್ಳು ಹೇಳುವುದರಲ್ಲಿ ಸಿಎಂ ಸಿದ್ದರಾಮಯ್ಯ, ರಾಹುಲ್ ಗಾಂಧಿ ಎತ್ತಿದ ಕೈ: ಕೆ.ಎಸ್.ಈಶ್ವರಪ್ಪ

ಹೊಸದಿಗಂತ ವರದಿ, ಚಿತ್ರದುರ್ಗ:
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ ಸುಳ್ಳು ಹೇಳುವುದರಲ್ಲಿ ಎತ್ತಿದ ಕೈ. ಇವರ ಸುಳ್ಳುಗಾರಿಕೆಗೆ ಅವರಿಬ್ಬರಿಗೂ ನೊಬೆಲ್ ಪ್ರಶಸ್ತಿ ಕೊಡಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪಂದು ಲೇವಡಿ ಮಾಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನುಡಿದಂತೆ ನಡೆದಿದ್ದೇವೆ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ಆದರೆ ಈವರೆಗೂ ಒಬ್ಬ ನಿರುದ್ಯೋಗಿಗೂ ಒಂದು ಬಿಡಿಗಾಸೂ ನೀಡಿಲ್ಲ. ರೈತರಿಗೆ ಸಮರ್ಪಕ ವಿದ್ಯುತ್ ನೀಡುತ್ತಿಲ್ಲ. ಅನೇಕ ಬಾರಿ ವಿದ್ಯುತ್ ದರ ಹೆಚ್ಚಿಸಿದ್ದಾರೆ. ಪಾಪರ್ ಆಗಿದ್ದೇವೆ ಎಂದು ಹೇಳಲೂ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಒಂದಾಗಲ್ಲ. ಇವರಂತೆಯೇ ರಾಹುಲ್ ಗಾಂಧಿ ರಾಮ ಮಂದಿರಕ್ಕೆ ಪರಿಶಿಷ್ಟರನ್ನು ಕರೆದಿಲ್ಲ ಎಂದು ಸುಳ್ಳು ಹೇಳಿದ್ದಾರೆ. ಮಾದಾರ ಚನ್ನಯ್ಯ ಸ್ವಾಮೀಜಿ, ಕಾಗಿನೆಲೆ ಸ್ವಾಮೀಜಿ ಸೇರಿ ಅನೇಕರು ಅಯೋಧ್ಯೆಗೆ ಹೋಗಿದ್ದು, ಕಾರ್ಯಕ್ರಮದ ಬಗ್ಗೆ ಶ್ರೀಗಳು ಆನಂದಪಟ್ಟಿದ್ದಾರೆ ಎಂದರು.
ಆರ್‌ಎಸ್‌ಎಸ್‌ನಲ್ಲಿ ಈಶ್ವರಪ್ಪಗೆ ಹೊಡಿ, ಬಡಿ, ಕಡಿ ಟ್ರೇನಿಂಗ್ ಆಗಿದೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಹೊಡಿ, ಬಡಿ, ಕಡಿ ಎಂದು ನಾನು ಹೇಳಿಲ್ಲ. ದೇಶ ವಿಭಜನೆ ಬಗ್ಗೆ ಮಾತನಾಡಿದ್ದರ ಬಗ್ಗೆ ಹೇಳಿದ್ದೇನೆ. ಭಾರತ ಮಾತೆ ತುಂಡು ಮಾಡುವ ವ್ಯಕ್ತಿಗೆ ಗುಂಡಿಕ್ಕುವ ಕಾನೂನು ತರಬೇಕೆಂದು ಹೇಳಿದ್ದೆ. ನನಗೆ ಆರ್‌ಎಸ್‌ಎಸ್‌ನಲ್ಲಿ ಟ್ರೇನಿಂಗ್ ಆಗಿದೆ. ಆದರೆ ಸಿದ್ದರಾಮಯ್ಯ ಅವರಿಗೆ ಟ್ರೇನಿಂಗ್ ಆಗದಿರುವುದೇ ಸಮಸ್ಯೆ. ಸಿದ್ದರಾಮಯ್ಯ ಒಂದು ದಿನ ಆರ್‌ಎಸ್‌ಎಸ್ ಟ್ರೇನಿಂಗ್‌ಗೆ ಬರಲಿ. ಆರ್‌ಎಸ್‌ಎಸ್‌ನಲ್ಲಿ ಏನು ಹೇಳಿಕೊಡುತ್ತಾರೆ ಎಂಬುದು ಗೊತ್ತಾಗುತ್ತದೆ ಎಂದು ಹೇಳಿದರು.

ರಾಮ ಮಂದಿರ ಬೇರೆ ಸ್ಥಳದಲ್ಲಿ ನಿರ್ಮಾಣ, ಅವ್ಯವಹಾರ ಆರೋಪ ವಿಚಾರವಾಗಿ ಮಾತನಾಡಿದ ಅವರು, ಸಚಿವ ಸಂತೋಷ್ ಲಾಡ್‌ಗೆ ಏನೂ ಗೊತ್ತಿಲ್ಲ. ಅಜ್ಞಾನದಿಂದ ಸಚಿವ ಸಂತೋಷ್ ಲಾಡ್ ಈ ರೀತಿ ಮಾತನಾಡುತ್ತಿದ್ದಾರೆ. ರಾಮ ಮಂದಿರ ದೇಶ ಒಂದಾಗಿಸಲು ಕಟ್ಟಿದ ಮಂದಿರ. ಅಯೋಧ್ಯೆಯಲ್ಲಿ ೭೦೦ಕ್ಕೂ ಹೆಚ್ಚು ಹೋಟೆಲ್ ನಿರ್ಮಾಣ ಆಗಲಿದ್ದು, ಅನೇಕರಿಗೆ ಉದ್ಯೋಗ ಅವಕಾಶ ಲಭಿಸಲಿದೆ. ಅಲ್ಲದೆ ರಾಮನೇ ಕಾಲ್ಪನಿಕ ಎಂದಿರುವ ಪಕ್ಷ ಕಾಂಗ್ರೆಸ್. ಹಾಗಾಗಿ ರಾಮ ಮಂದಿರ ಬಗ್ಗೆ ಮಾತಾಡುವ ಯೋಗ್ಯತೆ ಸಂತೋಷ್ ಲಾಡ್‌ಗೆ ಇಲ್ಲ ಎಂದು ಕಿಡಿಕಾರಿದರು.

ರಾಮ ಮಂದಿರ ನಿರ್ಮಾಣದಿಂದ ದೇಶದ ಜನರ ಒಗ್ಗೂಡಿಕೆ ಆಗಲಿದೆ. ಇದರಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಲಾಭ ಆಗಲಿದೆ. ಎನ್‌ಡಿಎ ೪೦೦ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದ ಅವರು, ಒಂದು ಕಡೆ ಮೋದಿ ಆಡಳಿತ, ಮತ್ತೊಂದು ಕಡೆ ರಾಮ ಇರುವುದರಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಲಾಭ ಆಗಲಿದೆ ಎಂದು ಹೇಳಿದರು.
ಮಾದಾರ ಚನ್ನಯ್ಯ ಸ್ವಾಮೀಜಿ ಚಿತ್ರದುರ್ಗ ಲೋಕಸಭೆಗೆ ಅಭ್ಯರ್ಥಿ ವಿಚಾರವಾಗಿ ಮಾತನಾಡಿದ ಅವರು, ರಾಜ್ಯಮಟ್ಟದಲ್ಲಿ ನಮಗೆ ಯಾವುದೇ ಮಾಹಿತಿ ಇಲ್ಲ. ಹೈಕಮಾಂಡ್ ಮಟ್ಟದಲ್ಲಿ ಏನು ಚಿಂತನೆ ನಡೆದಿದೆ ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾದಾರ ಚನ್ನಯ್ಯ ಸ್ವಾಮೀಜಿ ಬಂದರೆ ನಾನು ಖುಷಿ ಪಡುತ್ತೇನೆ ಎಂದು ಈಶ್ವರಪ್ಪ ಹೇಳಿದರು.ಕೇಂದ್ರದಿಂದ ರಾಜ್ಯಕ್ಕೆ ತೆರಿಗೆ ಅನುದಾನದ ವಿಚಾರವಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಕೇಂದ್ರ ಸರ್ಕಾರ ಶ್ವೇತಪತ್ರ ಹೊರಡಿಸಿದೆ. ಅದೇ ರೀತಿ ರಾಜ್ಯ ಸರ್ಕಾರವೂ ಶ್ವೇತಪತ್ರ ಹೊರಡಿಸಲಿ ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕರಾದ ಜಿಹೆಚ್.ತಿಪ್ಪಾರೆಡ್ಡಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುರೇಶ್ ಸಿದ್ದಾಪುರ, ಸಂಪತ್ ಕುಮಾರ್ ಉಪಸ್ಥಿತರಿದ್ದರು.
- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!