Saturday, February 24, 2024

ರಾಜ್ಯದಲ್ಲಿ ಬೂಸ್ಟರ್ ಡೋಸ್ ನೀಡಿಕೆಗೆ ಮುಖ್ಯಮಂತ್ರಿಗಳಿಂದ ಚಾಲನೆ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಸಾಮಾನ್ಯ ಆಶಾ ಕಾರ್ಯಕರ್ತರಿಂದ ಹಿಡಿದು ಪ್ರತಿಯೊಬ್ಬ ಆರೋಗ್ಯ ಕಾರ್ಯಕರ್ತರು ಕೂಡ ದೇಶದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಅಮೋಘ ಸೇವೆ ಮಾಡಿದ್ದಾರೆ. ಅವರು ಕೋವಿಡ್‌ನಿಂದ ದೇಶದ ನೈಜ ರಕ್ಷಕರಾಗಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶ್ಲಾಘಿಸಿದರು.

ಅವರಿಂದು ರಾಜ್ಯದಲ್ಲಿ ಮುಂಚೂಣಿ ಕಾರ್ಯಕರ್ತರಿಗೆ ಮುನ್ನೆಚ್ಚರಿಕೆ (ಬೂಸ್ಟರ್) ಡೋಸ್ ನೀಡಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕೋವಿಡ್‌ನಿಂದ ರಕ್ಷಣೆಯಾಗಬೇಕು, ಕೇವಲ ಭಾರತದಲ್ಲಿ ಮಾತ್ರವಲ್ಲ, ಇದೇ ಪ್ರಪಂಚದಲ್ಲಿ ಡಬ್ಲ್ಯುಎಚ್‌ಒ ಮಾರ್ಗದರ್ಶನದಲ್ಲಿ ಲಸಿಕಾಕರಣದಿಂದ ಮಾತ್ರ ಕೋವಿಡ್‌ನಿಂದ ರಕ್ಷಿಸಿಕೊಳ್ಳಲು ಸಾಧ್ಯವಿದೆ. ಬೇರೆ ಮಾರ್ಗವಿಲ್ಲ ಎಂದು ದೃಢಪಟ್ಟಿದೆ. ಹಾಗಾಗಿ ಎಲ್ಲ ದೇಶಗಳಲ್ಲಿ ಲಸಿಕೆ ನೀಡಿಕೆ ನಡೆಯುತ್ತಿದೆ ಎಂದರು.

ಅಮೆರಿಕಗಿಂತ ಮೂರು ಪಟ್ಟು ಹೆಚ್ಚು ಲಸಿಕೆ
ಪ್ರಾರಂಭದಲ್ಲಿ ಕೆಲವು ದೇಶಗಳು ವ್ಯಾಕ್ಸಿನೇಶನ್ ಬಗ್ಗೆ ಗಂಭೀರವಾಗಿ ಇರಲಿಲ್ಲ, ಉಡಾ ತೋರಿಸಿದ್ದವು. ಹೀಗಾಗಿ ಅಲ್ಲಿ ಎರಡನೇ ಅಲೆ, ಮೂರನೇ ಅಲೆ ಬಹಳ ಹೆಚ್ಚಾಗಿದೆ. ಈಗ ಪಾಶ್ಚಿಮಾತ್ಯ ದೇಶಗಳು ಕೋವಿಡ್ ಲಸಿಕೆ ಕಡ್ಡಾಯ ಮಾಡಿದ್ದಾರೆ. ಪ್ರಸಕ್ತ ಮುಂದುವರಿದ ದೇಶ ಅಮೆರಿಕದ ಮೂರು ಪಟ್ಟು ಹೆಚ್ಚು ಲಸಿಕಾಕರಣ ಭಾರತದಲ್ಲಿ ಆಗಿದೆ. ದೇಶದಲ್ಲಿ 150 ಕೋಟಿ ಲಸಿಕೆ ನೀಡಲಾಗಿದೆ. ಶೇ. 75ರಷ್ಟು ಎರಡನೇ ಡೋಸ್ ಲಸಿಕೆ ಕೊಟ್ಟಾಗಿದೆ ಎಂದು ಸಿಎಂ ಹೇಳಿದರು.

ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ, ಆರೋಗ್ಯ ಇಲಾಖೆಯ ಸಿಬ್ಬಂದಿ, ಅಧಿಕಾರಿಗಳ ಶ್ರಮದಿಂದ ಈ ಸಾಧನೆ ಮಾಡಲಾಗಿದೆ. ಆರಂಭದಲ್ಲಿ ಲಸಿಕೆ ಬಂದಾಗ ಅದರ ಬಗ್ಗೆ ಅಪಪ್ರಚಾರ ನಡೆಯಿತು. ಕೇವಲ ಲಸಿಕೆ ಮಾತ್ರ ವಿರೋಧವಲ್ಲ, ಪ್ರಾರಂಭದಲ್ಲಿ ಪರೀಕ್ಷೆಗೂ ವಿರೋಧ ವ್ಯಕ್ತವಾಯಿತು. ರಾಜಕೀಯಕ್ಕಾಗಿ, ವಿರೋಧಕ್ಕಾಗಿ ವಿರೋಧ ಮಾಡಿದರು ಎಂದು ವಿಷಾದಿಸಿದರು.

ಕರ್ನಾಟಕದಲ್ಲಿ ಕೋವಿಡ್ ಲಸಿಕೆ ಮೊದಲ ಡೋಸ್ ನೀಡಿಕೆ ಶೇ. 99ರಷ್ಟು ಸಾಧನೆಯಾಗಿದೆ. ಜನವರಿ 31ರೊಳಗೆ ಶೇ. 100ರಷ್ಟು ಮಾಡಬೇಕು. ಎರಡನೇ ಡೋಸ್ ಲಸಿಕೆ ಶೇ. 77ರಷ್ಟು ಸಾಧನೆಯಾಗಿದೆ. ಜನವರಿ ಅಂತ್ಯಕ್ಕೆ ಅದು ಶೇ. 80ರಷ್ಟಾಗಬೇಕು. ಇದೀಗ ಮೂರನೇ ಹಂತದ ಲಸಿಕೆ ನೀಡಿಕೆಯನ್ನು ಯಶಸ್ವಿ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ. ಕೆ. ಸುಧಾಕರ್, ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಮೊದಲಾದವರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!