ಹೊಸದಿಗಂತ ಡಿಜಿಟಲ್ ಡೆಸ್ಕ್:
ವರ್ಷಕ್ಕೊಮ್ಮೆ ನಡೆಯುವ ಹಾಸನಾಂಬ ಜಾತ್ರ ಮಹೋತ್ಸವದ ದಿನಾಂಕವನ್ನು ಘೋಷಣೆ ಮಾಡಲಾಗಿದೆ. ಈ ಬಾರಿ ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ ಜಾತ್ರೆ ನಡೆಯಲಿದ್ದು, ಎಲ್ಲ ಭಕ್ತಾದಿಗಳು ಆಗಮಿಸಿ ದೇವಿಯ ದರುಶನ ಪಡೆಯಿರಿ ಎಂದು ಹಾಸನ ಜಿಲ್ಲಾಡಳಿತ ಹೇಳಿದೆ.
ಈ ಬಗ್ಗೆ ಹಾಸನ ಡಿಸಿ ಕೆ.ಎಸ್. ಲತಾಕುಮಾರ್ ಮಾಹಿತಿ ನೀಡಿದ್ದು, ಈ ಬಾರಿ ಅದ್ಧೂರಿಯಾಗಿ ಹತ್ತು ದಿನಗಳ ಜಾತ್ರಾ ಮಹೋತ್ಸವ ನೆರವೇರಿಸಲಾಗುತ್ತದೆ. ಅ.29ರ ಮಧ್ಯಾಹ್ನ 12 ಗಂಟೆಗೆ ಹಾಸನಾಂಬ ದೇವಿಯ ಗರ್ಭಗುಡಿಯ ಬಾಗಿಲನ್ನು ತೆರೆಯಲಾಗುತ್ತದೆ. ಅಂದು ಸಾರ್ವಜನಿಕರಿಗೆ ದರುಶನಕ್ಕೆ ಅವಕಾಶ ಇಲ್ಲ. ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಮರುದಿನದಿಂದ 12 ದಿನಗಳ ಕಾಲ ದೇವಿಯ ದರುಶನಕ್ಕೆ ಅವಕಾಶ ನೀಡಲಾಗಿದೆ.
ಹಾಸನಾಂಬಾ ಜಾತ್ರಾ ಮಹೋತ್ಸವಕ್ಕಾಗಿ ಸೆ.26ರಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ ಅವರು ಪೋಸ್ಟರ್ ಬಿಡುಗಡೆ, ವೆಬ್‌ಸೈಟ್ ಲಾಂಚ್ ಮಾಡಲಿದ್ದಾರೆ. ಈ ಬಾರಿ ಹಾಸನ ಜಿಲ್ಲೆಯ ಏಳು ತಾಲೂಕುಗಳನ್ನು ಬರ ತಾಲೂಕುಗಳು ಎಂದು ಘೋಷಿಸಲಾಗಿದೆ. ಹೀಗಾಗಿ ಬರದ ಛಾಯೆಯ ನಡುವೆಯೂ ಅದ್ದೂರಿಯಾಗಿ ಅಲ್ಲದಿದ್ದರೂ ಶ್ರದ್ಧಾ, ಭಕ್ತಿ, ಸಡಗರದಿಂದ ಜಾತ್ರಾ ಮಹೋತ್ಸವ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಈ ಬಾರಿಯ ಜಾತ್ರೆಯಲ್ಲಿ ಆಹಾರ ಮೇಳ, ಚಿತ್ರಸಂತೆ, ಸಾಹಿತ್ಯ ವೈಭವ, ನೃತ್ಯಕಲೆ ಹೊಂದಿರುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜೊತೆಗೆ ಸಾಕಷ್ಟು ಬಗೆಬಗೆಯ ತಿನಿಸುಗಳು, ಆಟಿಕೆಗಳು ಇಲ್ಲಿ ಲಭ್ಯವಿರಲಿದೆ.



