July 17, 2026
Friday, July 17, 2026
spot_img

ಟೀಂ ಇಂಡಿಯಾದಲ್ಲಿ ಕೋಲ್ಡ್ ವಾರ್? ಕೊಹ್ಲಿ-ಗಂಭೀರ್ ನಡುವಿನ ವಿವಾದಕ್ಕೆ ಸಿಕ್ಕಿತು ಅಂತಿಮ ಸ್ಪಷ್ಟನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಸರಣಿಯ ವೇಳೆ ಟೀಂ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ಸುದ್ದಿಗಳು ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದವು. ನೆಟ್ಸ್ ಅಭ್ಯಾಸ ಹಾಗೂ ಎಡ್ಜ್‌ಬಾಸ್ಟನ್ ಪಂದ್ಯದ ವೇಳೆ ಇವರಿಬ್ಬರು ಪರಸ್ಪರ ಮಾತನಾಡದೇ ದೂರ ಉಳಿದಿರುವುದು ವದಂತಿಗಳಿಗೆ ಮತ್ತಷ್ಟು ರೆಕ್ಕೆಪುಕ್ಕ ನೀಡಿತ್ತು.

ಮೌನ ಮುರಿದ ಸೀತಾಂಶು ಕೊಟಕ್

ಕಾರ್ಡಿಫ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಯಾಟಿಂಗ್ ಕೋಚ್ ಸೀತಾಂಶು ಕೊಟಕ್, ಈ ಎಲ್ಲಾ ವದಂತಿಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. “ವಿರಾಟ್ ಹಾಗೂ ಗೌತಮ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಇಬ್ಬರೂ ಇಂದು ಕನಿಷ್ಠ 10 ಬಾರಿ ಮಾತನಾಡಿದ್ದಾರೆ. ಸಂವಹನ ನಡೆಸಲು ಅವರಿಬ್ಬರಿಗೂ ಯಾವುದೇ ಮಧ್ಯವರ್ತಿಗಳ ಅಗತ್ಯವಿಲ್ಲ” ಎಂದು ನಗುತ್ತಲೇ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ಡ್ರೆಸ್ಸಿಂಗ್ ರೂಂ ವಾತಾವರಣವು ಅತ್ಯಂತ ಸಾಮರಸ್ಯದಿಂದ ಕೂಡಿದೆ ಎಂದು ಅವರು ತಿಳಿಸಿದ್ದಾರೆ.

ಕ್ರೀಸ್‌ನಿಂದಲೇ ಸಂದೇಶ ಕಳುಹಿಸಿದ್ದ ವಿರಾಟ್!

ಇವರಿಬ್ಬರ ನಡುವಿನ ಉತ್ತಮ ಬಾಂಧವ್ಯಕ್ಕೆ ಕಾರ್ಡಿಫ್ ಪಂದ್ಯದ ಉದಾಹರಣೆ ನೀಡಿದ ಕೊಟಕ್, “ವಿರಾಟ್ ಬ್ಯಾಟಿಂಗ್ ಮಾಡುತ್ತಿದ್ದಾಗ ಕ್ರೀಸ್‌ನಿಂದಲೇ ಮುಖ್ಯ ಕೋಚ್ ಗಂಭೀರ್ ಮತ್ತು ಡ್ರೆಸ್ಸಿಂಗ್ ರೂಮ್‌ಗೆ ಪ್ರಮುಖ ಸಂದೇಶ ರವಾನಿಸಿದ್ದರು. ಕಾರ್ಡಿಫ್ ಪಿಚ್ ನಿಧಾನಗತಿಯಿಂದ ಕೂಡಿದ್ದು, ಶಾರ್ಟ್-ಪಿಚ್ ಎಸೆತಗಳನ್ನು ಎದುರಿಸುವುದು ಕಷ್ಟ ಎಂದು ಅವರು ನಮಗೆ ತಿಳಿಸಿದ್ದರು” ಎಂದಿದ್ದಾರೆ. ಈ ಮೂಲಕ ಇಬ್ಬರ ನಡುವಿನ ಒಗ್ಗಟ್ಟನ್ನು ಕೊಟಕ್ ಸಾಬೀತುಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !