ಜೇನು ಕುರುಬರ ಕರಿಯಪ್ಪ ಸಾವಿನ ಪ್ರಕರಣ: ಉನ್ನತ ಮಟ್ಟದ ತನಿಖೆಗೆ ಆಗ್ರಹ

ಹೊಸದಿಗಂತ ವರದಿ,ಮಡಿಕೇರಿ:

ಹೆಚ್.ಡಿ.ಕೋಟೆ ತಾಲ್ಲೂಕಿನ ಗುಂಡ್ರೆ ವ್ಯಾಪ್ತಿಯಲ್ಲಿ ನಡೆದ ಜೇನು ಕುರುಬ ಸಮುದಾಯದ ಕರಿಯಪ್ಪ ಅವರ ಸಾವಿನ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಪ್ಪಿಸುವ ಮೂಲಕ ಅಮಾಯಕ ಕುಂಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಬುಡಕಟ್ಟು ಕೃಷಿಕರ ಸಂಘದ ವಿರಾಜಪೇಟೆ ತಾಲ್ಲೂಕು ಅಧ್ಯಕ್ಷ ಜೆ.ಕೆ.ರಾಮು ಒತ್ತಾಯಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ತಲೆತಲಾಂತರಗಳಿಂದ ಅರಣ್ಯವನ್ನೇ ನಂಬಿ ಅರಣ್ಯದಂಚಿನಲ್ಲಿ ಸಣ್ಣ ಪುಟ್ಟ ಗುಡಿಸಲುಗಳನ್ನು ಕಟ್ಟಿ ಜೀವನ ನಡೆಸುತ್ತಿರುವ ಆದಿವಾಸಿಗಳ ಮೇಲೆ ಅರಣ್ಯ ಇಲಾಖೆಯ ಕೆಲವು ಸಿಬ್ಬಂದಿಗಳು ದೌರ್ಜನ್ಯ ನಡೆಸುತ್ತಿದ್ದಾರೆ. ಇದರ ಪರಿಣಾಮವಾಗಿಯೇ ಕರಿಯಪ್ಪ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ್ದಾರೆ.
ಆದಿವಾಸಿಗಳು ಅರಣ್ಯ ಕಿರು ಉತ್ಪನ್ನಗಳನ್ನು ಸಂಗ್ರಹಿಸಿ ಸಂಕಷ್ಟದ ಜೀವನ ನಡೆಸುತ್ತಿದ್ದಾರೆಯೇ ಹೊರತು ಲೂಟಿ ಮಾಡಿ ಶ್ರೀಮಂತಿಕೆಯಲ್ಲಿ ಬದುಕು ಸಾಗಿಸುತ್ತಿಲ್ಲ. ಸೌದೆ, ಜೇನು, ಮೇಣ, ಸೀಗೆಕಾಯಿ, ಪಾಚಿ ಸೇರಿದಂತೆ ಅರಣ್ಯದಲ್ಲಿ ಸಿಗುವ ಕಿರು ಉತ್ಪನ್ನಗಳನ್ನು ಸಂಗ್ರಹಿಸಲು ಕಾಡಿಗೆ ಹೋಗುತ್ತಾರೆ. ಈ ಸಂದರ್ಭ ಆದಿವಾಸಿಗಳ ಮೇಲೆ ಹಲ್ಲೆ ಮಾಡಿ ಪ್ರಕರಣ ದಾಖಲಿಸುತ್ತಿರುವ ಘಟನೆಗಳು ಕೊಡಗು ಜಿಲ್ಲೆಯಲ್ಲೂ ನಡೆಯುತ್ತಿದೆ ಎಂದು ದೂರಿಕೊಂಡಿದ್ದಾರೆ.
ಇತ್ತೀಚೆಗೆ ದಿಡ್ಡಳ್ಳಿಯಲ್ಲಿ ಆದಿವಾಸಿ ಮುಖಂಡ ಜೆ.ಕೆಅಪ್ಪಾಜಿ ಹಾಗೂ ರಾಜೇಶ್, ಹರೀಶ, ರಮೇಶ, ಸೋಮೂಣು, ಕುನ್ನು ಸೇರಿದಂತೆ ಹಲವರ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಬಂಧನಕ್ಕೊಳಪಡಿಸಿ ದೌರ್ಜನ್ಯ ನಡೆಸಲಾಗಿದೆ. ನಾಗರಹೊಳೆ ವ್ಯಾಪ್ತಿಯಲ್ಲಿ ಗುಡಿಸಲು ಕಟ್ಟಿ ಜೀವನ ಸಾಗಿಸುತ್ತಿರುವ ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ಹುನ್ನಾರದ ಭಾಗವಾಗಿ ಸುಳ್ಳು ಪ್ರಕರಣ ದಾಖಲಿಸಿ ಕಿರುಕುಳ ನೀಡಲಾಗುತ್ತಿದೆ ಎಂದು ರಾಮು ಆರೋಪಿಸಿದ್ದಾರೆ.
ಕಾಡಂಚಿನಲ್ಲಿ ಶತ ಶತಮಾನಗಳಿಂದ ಪಾರಂಪರಿಕ ಮತ್ತು ಅರಣ್ಯದ ಅವಿಭಾಜ್ಯ ಅಂಗವಾಗಿ ಬದುಕುತ್ತಿರುವ ಆದಿವಾಸಿಗಳ ಮೇಲೆ ನಿತ್ಯ ದೌರ್ಜನ್ಯ ನಡೆಯುತ್ತಿದ್ದು, ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುವ ಅರಣ್ಯ ಸಿಬ್ಬಂದಿಗಳನ್ನು ತಕ್ಷಣ ವಜಾಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
ಆದಿವಾಸಿಗಳಿಗೆ ಉತ್ತಮ ಬದುಕು ಮತ್ತು ರಕ್ಷಣೆ ನೀಡುವಲ್ಲಿ ಸರ್ಕಾರ ಸಂಪುರ್ಣವಾಗಿ ವಿಫಲವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!