ಹೊಸದಿಗಂತ ವರದಿ,ಹಾವೇರಿ:
ಜಿಲ್ಲೆಯಲ್ಲಿ ಔದ್ಯೋಗಿಕ ಕ್ರಾಂತಿ ಮಾಡಲಾಗುವುದು. ಜಿಲ್ಲೆಯಲ್ಲಿ ಒಂದು ಸಾವಿರ ಎಕರೆಯ ಕೈಗಾರಿಕಾ ಟೌನ್ ಶಿಪ್‌ನ್ನು ಪ್ರಾರಂಭ ಮಾಡುತ್ತಿದ್ದೇವೆ. ಹೆಚ್ಚು ಉದ್ಯೋಗ ನೀಡುವ ಸಿದ್ಧ ಉಡುಪು ತಯಾರಿಕಾ ಘಟಕಗಳನ್ನು ಹೆಚ್ಚೆಚ್ಚು ಜಿಲ್ಲೆಗೆ ತರಲಾಗುವುದು. ಶಿಗ್ಗಾಂವಿ ತಾಲೂಕು ಈಡಿ ಭಾರತ ದೇಶದಲ್ಲೇ ಟೆಕ್ಸಟೈಲ್ಸ್ ಹಬ್ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಮುನವಳ್ಳಿ ಗ್ರಾಮದ ಬಳಿ ಖಾಸಗಿ ಸಿದ್ದ ಉಡುಪು ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಸಿದ್ದ ಉಡುಪು ತಯಾರಿಕೆ ಉದ್ಯಮದಿಂದ ಹೆಚ್ಚು ಉದ್ಯೋಗ, ಸಿದ್ದ ಉಡುಪು ರಪ್ತಿನಿಂದ ವಿದೇಶಿ ವಿನಿಮಯ ಹೆಚ್ಚಾಗುತ್ತದೆ ಎಂದರು.
ನಮ್ಮ ಜನರ ಕೈಗೆ ಉದ್ಯೋಗ ಸಿಗಬೇಕು. ಅವರ ಕೈಗೂ ನಾಲ್ಕು ದುಡ್ಡು ಬರಬೇಕು. ಇದು ಪ್ರಾರಂಭಿಕ ಹಂತದ ಉದ್ಯೋಗ ಸೃಷ್ಠಿ. ಇನ್ನೊಂದು ವರ್ಷದಲ್ಲಿ ಎಂಟರಿಂದ ಹತ್ತು ಸಾವಿರ ಜನರಿಗೆ ಉದ್ಯೋಗ ಕೊಡುವ ಕೆಲಸ ನನ್ನ ಕ್ಷೇತ್ರದಲ್ಲಿ ಆಗುತ್ತದೆ ಎಂದು ಹೇಳಿದರು.
ಕಾಲ ಬದಲಾವಣೆ ಆಗುತ್ತಿದೆ. ಒಂದು ಕಾಲದಲ್ಲಿ ಯಾರಿಗೆ ಹೆಚ್ಚು ಭೂಮಿ ಇತ್ತೋ ಅವರು ದೊಡ್ಡವರು ಇರುತ್ತಿದ್ದರು. ಹೀಗಾಗಿ ರಾಜ ಮಹಾರಾಜರು ಯುದ್ಧ ಮಾಡಿ ಭೂಮಿ ಪಡೆದುಕೊಳ್ಳುತ್ತಿದ್ದರು. ೧೫-೧೬ನೇ ಶತಮಾನದಲ್ಲಿ ದುಡ್ಡು ಮತ್ತು ಉದ್ಯೋಗ ಮಾಡುವ ಶಕ್ತಿ ಇದ್ದವರು ವಿಶ್ವವನ್ನು ಆಳುತ್ತಿದ್ದರು. ಈಗ ವಿದ್ಯೆಯಿದ್ದವರ ಹಾಗೂ ಜ್ಞಾನವಿದ್ದವರ ಶತಮಾನ. ಜ್ಞಾನಕ್ಕೆ ತಂತ್ರಜ್ಞಾನ ಸೇರ್ಪಡೆಯಾಗಿದೆ ಎಂದರು.
ಭೂಮಿ ಎಷ್ಟಿದೆ ಈಗಲೂ ಅಷ್ಟೇ ಇದೆ. ಭೂಮಿ ಮೇಲೆ ಅಲವಂಬಿತರಾದವರು ಬಹಳ ಜನರಿದ್ದಾರೆ, ಹೀಗಾಗಿ ರೈತರ ಮಕ್ಕಳಿಗಾಗಿ ವಿದ್ಯಾನಿಧಿ ಯೋಜನೆ ಜಾರಿ ಮಾಡಿದೆ. ಈ ವರ್ಷ ಏಳು ಲಕ್ಷ ರೈತರ ಮಕ್ಕಳಿಗೆ ಯೋಜನೆ ಮುಟ್ಟಿದೆ. ಬರುವ ವರ್ಷದಲ್ಲಿ ಹದಿನಾಲ್ಕು ಲಕ್ಷ ರೈತರ ಮಕ್ಕಳಿಗೆ ಯೋಜನೆಯ ಲಾಭ ಸಿಗಲಿದೆ ಎಂದರು ತಿಳಿಸಿದರು.
ದುಡ್ಡೇ ದೊಡ್ಡಪ್ಪ ಅನ್ನೋ ಕಾಲವಿತ್ತು. ಅದು ಈಗ ದುಡಿಮೆಯೆ ದೊಡ್ಡಪ್ಪ ಅನ್ನುವಂತಾಗಿದೆ. ರೈತ ಮತ್ತು ಕಾರ್ಮಿಕ ವರ್ಗ ಈ ದೇಶವನ್ನು ಮುನ್ನಡೆಸುತ್ತಿದ್ದಾರೆ. ಅತಿ ಹೆಚ್ಚು ಉದ್ಯೋಗ ಕೊಡುವುದು ಜವಳಿ ಉದ್ಯಮ. ಆರ್ಥಿಕತೆ ಬೆಳೆಯಬೇಕಾದರೆ ಈ ರೀತಿಯ ಕಾರ್ಖಾನೆಗಳು ಬರಬೇಕು. ಸ್ಥಳೀಯರಿಗೆ ಸ್ಥಳದಲ್ಲೇ ಉದ್ಯೋಗ ಕೊಡುವಂತಾಗಬೇಕು. ನಮ್ಮ ಕ್ಷೇತ್ರದಲ್ಲಿ ಈಗಾಗಲೆ ನಾಲ್ಕು ಸಾವಿರ ಮಹಿಳೆಯರಿಗೆ ಉದ್ಯೋಗ ಸಿಕ್ಕಿದೆ. ಕ್ಷೇತ್ರದಲ್ಲಿ ಸಣ್ಣ ಸಣ್ಣ ಉದ್ಯಿಮೆಗಳಿವೆ. ನನ್ನ ಜನತೆ ಉತ್ತಮವಾದ ಕೆಲಸ ಮಾಡುತ್ತಾರೆ.
ನಮ್ಮ ಶಿಗ್ಗಾಂವಿ ತಾಲೂಕು ಈಡಿ ಭಾರತ ದೇಶದಲ್ಲೇ ಟೆಕ್ಸಟೈಲ್ಸ್ ಹಬ್ ಆಗಬೇಕು ಎಂಬುದು ನನ್ನ ಕನಸಿದೆ ಎಂದು ಹೇಳಿದರು.
ಹಾವೇರಿಯಲ್ಲಿ ಮೆಗಾ ಡೈರಿ ಅನುಮೋದನೆ ಕೊಟ್ಟಿದ್ದೇವೆ. ಹಾವೇರಿಯ ಹಾಲು ಒಕ್ಕೂಟದ ಕೆಲಸ ಈಗಾಗಲೆ ಪ್ರಾರಂಭ ಆಗಿದೆ. ಹಾಲು ಒಕ್ಕೂಟಕ್ಕಾಗಿ ನಾನು ಹೋರಾಟ ಮಾಡಿದ್ದೆ. ಅದರ ಕೆಲಸ ಈಗ ಆರಂಭವಾಗಿದೆ. ಕ್ಷೀರ ಕ್ರಾಂತಿ ಆಗಬೇಕು. ನಿಮ್ಮೆಲ್ಲರ ಸಹಕಾರ ಇರಲಿ. ಎರಡ್ಮೂರು ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳನ್ನು ಇಲ್ಲಿ ಮಾಡುತ್ತೇವೆ. ಶಿಕ್ಷಣ ಮತ್ತು ಉದ್ಯೋಗ ಮಾಡುತ್ತೇವೆ. ನಮ್ಮ ಭಾಗದಲ್ಲಿನ ಕೆರೆ ತುಂಬಿಸುವ ಯೋಜನೆಯ ಲಾಭ ಸಿಗುತ್ತಿರುವುದು ಸಚಿವ ಶಿವರಾಮ ಹೆಬ್ಬಾರ ಅವರಿಗೆ. ಅವರು ಸಕ್ಕರೆ ಕಾರ್ಖಾನೆ ಮಾಡಿ ರೈತರಿಗೆ ಕಬ್ಬು ಬೆಳೆಯಲು ಬೀಜ ವಿತರಣೆ ಮಾಡಿದ್ದಾರೆ ಎಂದು ತಿಳಿಸಿದರು.
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಮಾತನಾಡಿದರು. ವೇದಿಕೆಯಲ್ಲಿ ಸಿದ್ದುಡುಪು ಕಾರ್ಖಾನೆಯ ಅಧ್ಯಕ್ಷ ಆನಂದ, ನಿರ್ದೇಶಕರಾಘವನ್, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿ.ಪಂ ಸಿಇಒ ಮೊಹ್ಮದ ರೋಷನ್ ಸೇರಿದಂತೆ ಅನೇಕರಿದ್ದರು.