ಮತ್ತೆ ಗಾಜಾ ಮೇಲೆ ಇಸ್ರೇಲ್​ ದಾಳಿ: ಮಕ್ಕಳು ಸೇರಿ 14 ಜನ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಸ್ರೇಲ್ ಮತ್ತೆ ರಫಾ ನಗರದ ಪಶ್ಚಿಮ ದಡದಲ್ಲಿರುವ ನಿರಾಶ್ರಿತರ ಶಿಬಿರದ ಮೇಲೆ ದಾಳಿ ನಡೆಸಿದ್ದು,14 ಜನರು ಸಾವನ್ನಪ್ಪಿದ್ದಾರೆ ಎಂದು ಪ್ಯಾಲೆಸ್ತೀನ್ ಆರೋಗ್ಯ ಸಚಿವಾಲಯ ತಿಳಿಸಿದೆ.

ದಾಳಿಯಲ್ಲಿ ಗಾಯಗೊಂಡವರನ್ನು ಕರೆದೊಯ್ಯಲು ಬಂದಿದ್ದ ಆಂಬ್ಯುಲೆನ್ಸ್ ಚಾಲಕ ಸಹ ಮೃತಪಟ್ಟಿದ್ದಾನೆ. ಇಸ್ರೇಲಿ ಪಡೆಗಳು 24 ಗಂಟೆಗಳಿಗೂ ಹೆಚ್ಚು ಕಾಲ ದಾಳಿ ನಡೆಸುತ್ತಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಪ್ಯಾಲೆಸ್ತೀನ್​ನ ತುಲ್ಕರ್ಮ್ ನಗರ ಸಮೀಪದ ನೂರ್ ಶಮ್ಸ್ ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆಯಿಂದ ಇಸ್ರೇಲ್ ಪಡೆಗಳು ದಾಳಿ ನಡೆಸಿವೆ. ಶನಿವಾರದವರೆಗೆ ಸುಮಾರು 24 ಗಂಟೆಗಳ ಕಾಲ ಗುಂಡಿನ ದಾಳಿ ಮುಂದುವರೆದಿದೆ. ದಾಳಿಯಲ್ಲಿ ಮೃತಪಟ್ಟವರಲ್ಲಿ ಒಬ್ಬ ಹುಡುಗ ಮತ್ತು ಯುವಕ ಸೇರಿದ್ದಾರೆ. ಗಾಯಾಳುಗಳನ್ನು ಕರೆದೊಯ್ಯಲು ಬಂದಿದ್ದ ಆಂಬ್ಯುಲೆನ್ಸ್ ಚಾಲಕ ಮೊಹಮ್ಮದ್ ಅವಾದ್ ಅಲ್ಲಾ ಮೂಸಾ (50) ಅವರನ್ನು ಇಸ್ರೇಲ್ ಸೇನೆ ಹತ್ಯೆ ಮಾಡಿದೆ. ಆಂಬ್ಯುಲೆನ್ಸ್ ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಇಂತಹ ದಾಳಿಗಳು ಅಂತಾರಾಷ್ಟ್ರೀಯ ಮಾನವೀಯ ಕಾನೂನಿನ ಉಲ್ಲಂಘನೆಯ ಅಡಿಯಲ್ಲಿ ಬರುತ್ತವೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಮತ್ತೊಂದೆಡೆ, ಶುಕ್ರವಾರ ರಾತ್ರಿ ನಡೆಸಿದ ವೈಮಾನಿಕ ದಾಳಿಯಲ್ಲಿ 9 ಜನರು ಸಾವನ್ನಪ್ಪಿದ್ದರು. ಮೃತರಲ್ಲಿ ಆರು ಮಕ್ಕಳು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಜಿಪ್ಟ್ ಬಳಿ ಗಾಜಾದ ದಕ್ಷಿಣದಲ್ಲಿರುವ ಈ ನಗರದಲ್ಲಿ 12 ದಶಲಕ್ಷಕ್ಕೂ ಹೆಚ್ಚು ಪ್ಯಾಲೆಸ್ತೀನಿಯಾದವರು ಅಡಗಿಕೊಂಡಿದ್ದಾರೆ. ಅವರಲ್ಲಿ ಹೆಚ್ಚಿನವರು ಇಸ್ರೇಲ್ ದಾಳಿಯಿಂದಾಗಿ ಉತ್ತರ ಗಾಜಾ ಮತ್ತು ಮಧ್ಯ ಗಾಜಾವನ್ನು ತೊರೆದವರು ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಯುನೈಟೆಡ್ ಸ್ಟೇಟ್ಸ್ ಮತ್ತು ಬ್ರಿಟನ್ ಸೇರಿದಂತೆ ಹಲವು ದೇಶಗಳು ಈ ನಗರದ ಮೇಲೆ ದಾಳಿ ಮಾಡಿದರೆ ದೊಡ್ಡ ಮಾನವೀಯ ಬಿಕ್ಕಟ್ಟು ಉಂಟಾಗುತ್ತದೆ ಎಂದು ಇಸ್ರೇಲ್​ಗೆ ಎಚ್ಚರಿಕೆ ನೀಡಿದೆ. ಆದರೂ ಇಸ್ರೇಲ್ ಹಿಂದೆ ಸರಿಯುತ್ತಿಲ್ಲ.

ಮತ್ತೊಂದೆಡೆ, ಯುದ್ಧದಲ್ಲಿರುವ ಉಕ್ರೇನ್ ಮತ್ತು ಇಸ್ರೇಲ್‌ ದೇಶಗಳಿಗೆ ಅಮೆರಿಕ ಭಾರಿ ಆರ್ಥಿಕ ನೆರವು ನೀಡಲಿದೆ. US ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಶನಿವಾರ 95 ಶತಕೋಟಿ ಡಾಲರ್ ಸಹಾಯವನ್ನು ಅನುಮೋದಿಸಿತು. ಇದಕ್ಕೆ ಡೆಮೋಕ್ರಟಿಕ್​ ಮತ್ತು ರಿಪಬ್ಲಿಕನ್ನರು ಕೈಜೋಡಿಸಿದರು. US $ 61 ಶತಕೋಟಿ ಉಕ್ರೇನ್‌ಗೆ, $ 26 ಶತಕೋಟಿ ಇಸ್ರೇಲ್‌ಗೆ ಮತ್ತು ಉಳಿದ ಹಣವನ್ನು ಗಾಜಾದಲ್ಲಿ ಮಾನವೀಯ ಸಹಾಯಕ್ಕಾಗಿ ನೀಡುತ್ತಿದೆ ಎಂದು ವರದಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!