ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತವು ತನ್ನ ನಿಕಟ ಮಿತ್ರರಾಷ್ಟ್ರಗಳಲ್ಲಿ ಒಂದಾಗಿದೆ. ಅದು ನಮ್ಮ ಪ್ರಮುಖ ಪಾಲುದಾರ ದೇಶವಾಗಿದ್ದು, ನಮಗೆ ಅಗತ್ಯವಿರುವಾಗ, ಸಹಾಯ ಮಾಡುವಲ್ಲಿ ಮುಂದಾಳತ್ವ ವಹಿಸುತ್ತದೆ ಎಂದು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಹೇಳಿದ್ದಾರೆ.
ಈ ಹಿಂದೆ ಭಾರತದ ಕುರಿತು ಉರಿದುಬೀಳುತ್ತಿದ್ದ ಮಾಲ್ಡೀವ್ಸ್ ಅಧ್ಯಕ್ಷ ಮುಯಿಜ್ಜು ಇದೀಗ ಯು-ಟರ್ನ್ ಹೊಡೆದಿದ್ದು, ಈ ಬಾರಿ ಅವರು ಭಾರತದ ಬಗ್ಗೆ ಸಕಾರಾತ್ಮಕ ಮಾತುಗಳನ್ನಾಡಿದ್ದಾರೆ.
ಮಾಲ್ಡೀವ್ಸ್‌ನ 28 ದ್ವೀಪಗಳಿಗೆ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ ಸೃಷ್ಟಿಗೆ ಭಾರತ ಕೊಡುಗೆ ನೀಡಿದೆ. ಇದಕ್ಕಾಗಿ ಎಕ್ಸಿಮ್ ಬ್ಯಾಂಕ್ ಆಫ್ ಇಂಡಿಯಾ ಸಬ್ಸಿಡಿ ಬಡ್ಡಿಯೊಂದಿಗೆ ಸಾಲ ನೀಡಿದೆ. ಈ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಯಿಜ್ಜು ಮಾತನಾಡಿದರು.
ಈ ಯೋಜನೆ ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳಲ್ಲಿ ಪ್ರಮುಖ ಮೈಲಿಗಲ್ಲು ಎಂದು ಬಣ್ಣಿಸಿದ ಮುಯಿಜ್ಜು, ಭಾರತದೊಂದಿಗೆ ಇರುವ ಐತಿಹಾಸಿಕ ನಿಕಟ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲು ಬದ್ಧವಾಗಿರುವುದಾಗಿ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರು ಮಾಲ್ಡೀವ್ಸ್ ಬಗ್ಗೆ ಉದಾರತೆ ತೋರಿದ್ದಕ್ಕಾಗಿ ಭಾರತ ಸರ್ಕಾರ ಮತ್ತು ಜನರಿಗೆ ಧನ್ಯವಾದ ತಿಳಿಸುವುದಾಗಿ ಹೇಳಿದರು.
ಸಾಲ ಮನ್ನಾ ಮಾಡುವಂತೆ ಭಾರತಕ್ಕೆ ಈ ಹಿಂದೆ ಮುಯಿಜ್ಜು ಮನವಿ ಮಾಡಿದ್ದರು. ಕಳೆದ ವರ್ಷಾಂತ್ಯಕ್ಕೆ ಮಾಲ್ಡೀವ್ಸ್ ಸುಮಾರು 4ನೂರು ಮಿಲಿಯನ್ ಡಾಲರ್ ಸಾಲವನ್ನು ಭಾರತಕ್ಕೆ ನೀಡಬೇಕಿದೆ. ಕೆಲವು ತಿಂಗಳ ಹಿಂದೆ ಮರುಪಾವತಿಯಲ್ಲಿ ಪರಿಹಾರಕ್ಕಾಗಿ ಮುಯಿಜ್ಜು ಮನವಿ ಮಾಡಿದ್ದರು. ಇದಕ್ಕೆ ಭಾರತ ಸ್ಪಂದಿಸಿತ್ತು. ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಿದ ಕಾರ್ಯಕ್ರಮದಲ್ಲಿ ಮುಯಿಜ್ಜು ಭಾಗವಹಿಸಿದ್ದನ್ನು ಸ್ಮರಿಸಬಹುದು.