ʼಕಾಮನ್‌ ವೆಲ್ತ್‌ ಕ್ರಿಕೆಟ್‌ʼನಲ್ಲಿ ಇಂದು ಇಂಡೋ- ಆಸಿಸ್ ಸೆಣಸಾಟ: ಹರ್ಮನ್‌ ಪ್ರೀತ್‌ ಪಡೆ ಸಂಭಾವ್ಯ XI ಹೀಗಿದೆ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಇಂಗ್ಲೆಂಡ್ ನ ಬರ್ಮಿಂಗ್ಹ್ಯಾಮ್ ನಲ್ಲಿ ಇಂದು ಸೂರ್ಯ ಉದಯವಾಗುತ್ತಿದ್ದಂತೆ ಮಹಿಳೆಯರ ಟಿ.20 ಕ್ರಿಕೆಟ್‌ನ ರೋಚಕತೆ ರಂಗೇಳಲಿದೆ. 2022 ರ ಕಾಮನ್‌ವೆಲ್ತ್ ಕ್ರೀಡಾಕೂಟದ ಕ್ರಿಕೆಟ್ ವಿಭಾಗದಲ್ಲಿ ಚಿನ್ನ ಗೆಲ್ಲುವ ವಿಶ್ವಾಸದಲ್ಲಿರುವ ಭಾರತದ ವನಿತೆಯ ಪಡೆ ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಟಿ 20 ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾವನ್ನು ಎದುರಿಸಲಿದೆ.
ಆಸ್ಟ್ರೇಲಿಯಾವನ್ನು ಮೆಗ್ ಲ್ಯಾನಿಂಗ್ ಮುನ್ನಡೆಸಿದರೆ, ಭಾರತವನ್ನು ಹರ್ಮನ್‌ಪ್ರೀತ್ ಕೌರ್ ಮುನ್ನಡೆಸಲಿದ್ದಾರೆ. 1998 ರ ಕೌಲಾಲಂಪುರದಲ್ಲಿ ಆವೃತ್ತಿಯಲ್ಲಿ ಪುರುಷರ ಕ್ರಿಕೆಟ್‌ ಪಂದ್ಯಾವಳಿ ನಡೆದ 24 ವರ್ಷಗಳ ಬಳಿಕ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕ್ರಿಕೆಟ್‌ ಪುನರಾಗಮನ ಮಾಡಿದೆ.
ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಹಾಗೂ ದೀಪ್ತಿ ಶರ್ಮಾ ಅವರಿರುವ ಭಾರತ ಬ್ಯಾಟಿಂಗ್‌ ಪಡೆ ಅತ್ಯಂತ ಸದೃಢವಾಗಿದೆ. ಶ್ರೀಲಂಕಾ ಸರಣಿಯಿಂದ ವಿಶ್ರಾಂತಿ ಪಡೆದಿದ್ದ ಆಲ್ರೌಂಡರ್ ಸ್ನೇಹ ರಾಣಾ ಮತ್ತು ವಿಕೆಟ್ ಕೀಪರ್ ಬ್ಯಾಟರ್ ಯಾಸ್ತಿಕಾ ಭಾಟಿಯಾ ತಂಡಕ್ಕೆ ಮರಳುವುದರೊಂದಿಗೆ ತಂಡ ಮತ್ತಷ್ಟು ಬಲಿಷ್ಠವಾಗಿದೆ. ಬೌಲಿಂಗ್‌ ನಲ್ಲಿ ದೀಪ್ತಿ ಶರ್ಮಾ, ರಾಜೇಶ್ವರಿ ಗಾಯಕ್ವಾಡ್, ರೇಣುಕಾ ಠಾಕೂರ್ ಹಾಗೂ ರಾಧಾ ಯಾದವ್ ಪಂದ್ಯವನ್ನು ಯಾವುದೇ ಹಂತದಲ್ಲಿ ತಿರುಗಿಸುವ ಸಾಮರ್ಥ್ಯವನ್ನು ಹೊಂದಿದ್ದು, ಭಾರತವು ಎಲ್ಲಾ ವಿಭಾಗಗಳಲ್ಲಿ ಸಮತೋಲಿತ ತಂಡವಾಗಿ ಕಾಣುತ್ತಿದೆ.  ಕೊರೋನಾ ಸೋಂಕಿಕೊಳಗಾಗಿರುವ ಆಲ್‌ರೌಂಡರ್ ಪೂಜಾ ವಸ್ತ್ರಾಕರ್ ಮತ್ತು ಬ್ಯಾಟರ್ ಸಬ್ಬಿನೇನಿ ಮೇಘನಾ ಈ ಪಂದ್ಯದಿಂದ ಹೊರಗುಳಿಯಲಿದ್ದು ಕೊಂಚ ಹಿನ್ನಡೆಯಾಗಬಹುದು.
ಮತ್ತೊಂದೆಡೆ, ಇತ್ತೀಚೆಗೆ ನ್ಯೂಜಿಲೆಂಡ್‌ ನಡೆದ T20 ವಿಶ್ವಕಪ್ ನಲ್ಲಿ ವಿಜಯ ಪತಾಕೆ ಹಾರಿಸಿರುವ ಆಸ್ಟ್ರೇಲಿಯಾವು ಆ ವೇಳೆ  ತಂಡದಲ್ಲಿದ್ದ ಆಟಗಾರರನ್ನೇ ಕಣಕ್ಕಿಳಿಸಲಿದೆ. ಎಲ್ಲಿಸ್ ಪೆರ್ರಿ, ಮೆಗ್ ಲ್ಯಾನಿಂಗ್ , ರಾಚೆಲ್ ಹೇನ್ಸ್ , ಆಶ್ಲೇ ಗಾರ್ಡ್ನರ್, ಅಲಿಸ್ಸಾ ಹೀಲಿ, ಬೆತ್ ಮೂನಿ ಮೊದಲಾಗ ದಿಗ್ಗಜ ಆಟಗಾರ್ತಿಯರಿರುವ ತಂಡವು ಭಾರತಕ್ಕೆ ಪ್ರಭಲ ಸವಾಲು ಒಡ್ಡಲಿದೆ. ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಭಾರತ- ಆಸ್ಟ್ರೇಲಿಯಾ ತಂಡಗಳು ಪದಕ ಗೆಲ್ಲುವ ನೆಚ್ಚಿನ ತಂಡಗಳಾಗಿದ್ದ, ಈ ಮುಖಾಮುಖಿಯನ್ನೋನು ನೋಡಲು ಎರಡೂ ಕಡೆಯ ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಈ ಪಂದ್ಯ ಭಾರತೀಯ ಕಾಲಮಾನ 3.30ಕ್ಕೆ ಪ್ರಾರಂಭವಾಗಲಿದೆ. ಸೋನಿ ನೆಟ್ವರ್ಕ್‌ ಚಾನೆಲ್‌ ನಲ್ಲಿ ಪಂದ್ಯದ ನೇರ ಪ್ರಸಾರ ವೀಕ್ಷಿಸಬಹುದಾಗಿದೆ.
ಸಂಭಾವ್ಯ ತಂಡಗಳು:
ಭಾರತ: ಸ್ಮೃತಿ ಮಂದಾನ (ಉಪನಾಯಕಿ), ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ (ವಿಕೆಟ್-ಕೀಪರ್), ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ದೀಪ್ತಿ ಶರ್ಮಾ, ಸ್ನೇಹ ರಾಣಾ, ಮೇಘನಾ ಸಿಂಗ್,  ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್, ರೇಣುಕಾ ಠಾಕೂರ್.

ಆಸ್ಟ್ರೇಲಿಯಾ: ಮೆಗ್ ಲ್ಯಾನಿಂಗ್ (ನಾಯಕಿ), ಅಲಿಸ್ಸಾ ಹೀಲಿ (ವಿಕೆಟ್ ಕೀಪರ್), ರಾಚೆಲ್ ಹೇನ್ಸ್ (ಉಪನಾಯಕಿ), ಆಶ್ಲೀ ಗಾರ್ಡ್ನರ್, ಎಲಿಸ್ಸಾ ಪೆರ್ರಿ, ಬೆತ್ ಮೂನಿ, ಡಾರ್ಸಿ ಬ್ರೌನ್,  ಗ್ರೇಸ್ ಹ್ಯಾರಿಸ್,  ಜೆಸ್ ಜೊನಾಸೆನ್, ತಾಲಿಯಾ ಮೆಕ್‌ಗ್ರಾತ್, ಅಮಂಡಾ-ಜೇಡ್ ವೆಲ್ಲಿಂಗ್ಟನ್.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!