ಅರಣ್ಯ ಇಲಾಖೆಗೆ 7 ವರ್ಷ ಜೊತೆಗಾರನಾಗಿದ್ದ ರಾಣಾಗೆ ಕಂಬನಿಯ ವಿದಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

7 ವರ್ಷಗಳಿಂದ ಕಾಡುಗಳ್ಳರ ನಿದ್ರೆ ಕದ್ದಿದ್ದ ಸುಮಾರು 10 ವರ್ಷದ ಜರ್ಮನ್ ಶೆಫರ್ಡ್ ತಳಿಯ ಶ್ವಾನ ಸೋಮವಾರ ರಾತ್ರಿ ಅಸುನೀಗಿತ್ತು. ಇದು ಅರಣ್ಯ ಇಲಾಖೆಯಲ್ಲಿ ಕರ್ನಾಟಕಕ್ಕೆ ಸೇರ್ಪಡೆಗೊಂಡ ಮೊದಲ ಶ್ವಾನ ಇದಾಗಿತ್ತು.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಕಳ್ಳ ಬೇಟೆ, ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು, ವನ್ಯಜೀವಿ ಬೇಟೆಗಾರರನ್ನು ನಿಗ್ರಹಿಸಲು ಮತ್ತು ಅರಣ್ಯ ಮೊಕದ್ದಮೆಗಳನ್ನು ಭೇದಿಸುವುದಕ್ಕಾಗಿ ನೇಮಕವಾಗಿತ್ತು.
‘ರಾಣಾ’ 28-12-2013 ರಂದು ಜನಿಸಿದ್ದು ಜರ್ಮನ್ ಶೆಫರ್ಡ್ ತಳಿಯಾಗಿದೆ. ‘ರಾಣಾ’ವು ಭೂಪಾಲ್‍ನ ವಿಶೇಷ ಸಶಸ್ತ್ರ ಪಡೆಗಳ 28ನೇ ಬೆಟಾಲಿಯನ್‍ನಲ್ಲಿ ತರಬೇತಿಯ ಪಡೆದು ಬಂಡೀಪುರದಲ್ಲಿ ಕರ್ತವ್ಯಕ್ಕೆ ಹಾಜರಾಗಿತ್ತು.
ಕರ್ತವ್ಯದ ಪ್ರಾರಂಭದಲ್ಲಿಯೇ ಎನ್.ಬೇಗೂರು ವಲಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ತೇಗದ ಮರ ಕಡಿದ ಮೂವರನ್ನು ಪತ್ತೆ ಹಚ್ಚುವಲ್ಲಿ ಸಹಾಯ ಮಾಡಿತ್ತು. ಬಳಿಕ ಓಂಕಾರ ವಲಯದ ವ್ಯಾಪ್ತಿಯಲ್ಲಿ ಚಿರತೆಗಳ ವಿಷ ಪ್ರಾಶನ ಪ್ರಕರಣ, ಮೈಸೂರು ವಿಭಾಗದ ವ್ಯಾಪ್ತಿಗೆ ಬರುವ ಶ್ರೀರಂಗಪಟ್ಟಣದಲ್ಲಿ ಶ್ರೀಗಂಧ ಕಳ್ಳರ ಪತ್ತೆಹಚ್ಚುವಿಕೆ ಪ್ರಕರಣ ಭೇದಿಸಿತ್ತು.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವಲ್ಲದೇ ರಾಜ್ಯದ ವಿವಿಧ ಅರಣ್ಯ ವಿಭಾಗಗಳ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿದ್ದ ಹುಲಿ, ಚಿರತೆಯಂತಹ ಪ್ರಾಣಿಗಳ ಸ್ಥಳಗಳನ್ನು ಗುರುತು ಮಾಡಿಕೊಟ್ಟು ಸೆರೆ ಹಿಡಿಯುವ ಕಾರ್ಯಾಚರಣೆಗಳಿಗೆ ಯಶಸ್ಸು ತಂದುಕೊಟ್ಟಿತ್ತು. ವಿಶೇಷವಾಗಿ ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರುವ ಗುಡಲೂರಿನಲ್ಲಿ 8 ತಿಂಗಳುಗಳವರೆಗೆ ಉಪಟಳ ನೀಡುತ್ತಿದ್ದ ನರಭಕ್ಷಕ ಹುಲಿಯನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ರಾಣಾನ ಕೊಡುಗೆ ಇತ್ತು.

ರಾಣಾ ತನ್ನ ಏಳು ವರ್ಷಗಳ ಸೇವಾವಧಿಯಲ್ಲಿ 8 ಹುಲಿ ಸಂಬಂಧಿತ ಪ್ರಕರಣಗಳು, 45ಕ್ಕೂ ಹೆಚ್ಚು ಚಿರತೆ ಸಂಬಂಧಿತ ಪ್ರಕರಣಗಳು, ಹಲವಾರು ಮರಗಳ್ಳತನ ಪ್ರಕರಣಗಳು, ಉರುಳು ಪತ್ತೆ ಕಾರ್ಯಗಳಲ್ಲಿ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುವುದಲ್ಲದೇ ದೈನಂದಿನ ಅರಣ್ಯ ಮತ್ತು ವನ್ಯಪ್ರಾಣಿ ಸಂರಕ್ಷಣೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ತನ್ನದೇ ಆದ ಛಾಪು ಮೂಡಿಸಿತ್ತು.

ಮೃತ ‘ರಾಣಾ’ನ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ನಿರ್ದೇಶಕರು, ಹುಲಿಯೋಜನೆ, ಬಂಡೀಪುರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಬಂಡೀಪುರ ಹಾಗೂ ಹೆಡಿಯಾಲ ಉಪವಿಭಾಗ, ರಕ್ಷಣಾ ಸಿಬ್ಬಂದಿು, ಜಿ.ಎಸ್.ಬೆಟ್ಟವಲಯ ಹಾಗೂ ವಿಶೇಷ ಹುಲಿ ಸಂರಕ್ಷಣಾ ದಳ ನೆರವೇರಿಸಿ, ಕಂಬನಿ ಮಿಡಿದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!