ಮಲೆನಾಡು- ಕರಾವಳಿಯಲ್ಲಿ ಭಾರೀ ಮಳೆ: ಶುರುವಾಗಿದೆ ಭೂ ಕುಸಿತದ ಆತಂಕ

ಹೊಸದಿಗಂತ ವರದಿ, ಮಡಿಕೇರಿ:

ಮುಂದಿನ 10 ದಿನಗಳ ಕಾಲ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ಇದ್ದು, ಭೂಕುಸಿತ ಪ್ರದೇಶಗಳಲ್ಲಿ ಹೆಚ್ಚಿನ ಗಮನಹರಿಸುವಂತೆ ಜಿಲ್ಲಾಡಳಿತಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿರ್ದೇಶನ ನೀಡಿದ್ದಾರೆ.
ಜಿಲ್ಲಾಧಿಕಾರಿಗಳು, ಜಿ.ಪಂ.ಸಿಇಒ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಜೊತೆ ಮಂಗಳವಾರ ನಡೆದ ವಿಡಿಯೋ ಸಂವಾದದಲ್ಲಿ ಮಾಹಿತಿ ಪಡೆದು ಅವರು ಮಾತನಾಡಿದರು.

ಕೂಡಲೇ ಪರಿಹಾರ ವಿತರಿಸಬೇಕು
ಮುಂದಿನ ಹತ್ತು ದಿನಗಳಲ್ಲಿ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದ್ದು, ಈ ಸಂಬಂಧ ಸೂಕ್ಷ್ಮ ಪ್ರದೇಶದಲ್ಲಿನ ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸುವಂತೆ ಮುಖ್ಯಮಂತ್ರಿ ಹೇಳಿದರು.
ಮನೆ ಹಾನಿಗೆ ಸಂಬಂಧಿಸಿದಂತೆ ಕೂಡಲೇ ಪರಿಹಾರ ವಿತರಿಸಬೇಕು. ಸಂತ್ರಸ್ತರಿಗೆ ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ಗಮನಹರಿಸಬೇಕೆಂದು ಅವರು ಸೂಚಿಸಿದರು.
ಈಗಾಗಲೇ ಕೈಗೊಂಡಿರುವ ವಿಶೇಷ ಕಾರ್ಯಪಡೆ, ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್ ತಂಡಗಳ ಕಾರ್ಯನಿರ್ವಹಣೆ, ಕಾಳಜಿ ಕೇಂದ್ರಗಳಲ್ಲಿ ಅಗತ್ಯ ಮೂಲ ಸೌಲಭ್ಯ ಕಲ್ಪಿಸುವುದು ಮತ್ತಿತರವನ್ನು ಮುಂದುವರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿರ್ದೇಶನ ನೀಡಿದರು.
ಜಿಲ್ಲಾಡಳಿತ ಭವನ ಬಳಿಯ ತಡೆಗೋಡೆ ಸಂಬಂಧಿಸಿದಂತೆ ಮಾಹಿತಿ ಪಡೆದ ಮುಖ್ಯಮಂತ್ರಿ ಅವರು, ತಡೆಗೋಡೆಗೆ ಸದ್ಯ ಮರಳು ಮೂಟೆಗಳನ್ನು ಅಳವಡಿಸಲಾಗಿದ್ದು, ಲಘು ವಾಹನ ಸಂಚಾರಕ್ಕೆ ಅವಕಾಶ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದರು.
ತಲಾ 10 ಸಾವಿರ ರೂ. ಪರಿಹಾರ:ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾಹಿತಿ ನೀಡಿ, ಕಳೆದ 24 ಗಂಟೆ ಅವಧಿಯಲ್ಲಿ ಸಂಪಾಜೆ ಮತ್ತು ಕರಿಕೆ ಭಾಗದಲ್ಲಿ ಹೆಚ್ಚಿನ ಮಳೆಯಾಗಿತ್ತು, ಕೊಯನಾಡು ಬಳಿ 5 ಮನೆ ಮತ್ತು ಸಂಪಾಜೆ ಬಳಿ 2 ಮನೆಗಳಿಗೆ ಹಾನಿಯಾಗಿದೆ. 12 ಕಡೆ ಮಣ್ಣು ಕುಸಿತ ಉಂಟಾಗಿದೆ. ಸದ್ಯ ಮನೆ ಹಾನಿಯಾಗಿರುವುದಕ್ಕೆ ತಲಾ 10 ಸಾವಿರ ರೂ. ಪರಿಹಾರ ವಿತರಿಸಲಾಗಿದೆ ಎಂದರು.
ಸದ್ಯ ಕಾಳಜಿ ಕೇಂದ್ರದಲ್ಲಿ 5 ಕುಟುಂಬದ 21 ಜನರು ಇದ್ದಾರೆ. ಸಂಬಂಧಿಕರ ಮನೆಯಲ್ಲಿರುವವರಿಗೂ ಸಹ ಆಹಾರ ಕಿಟ್ ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಆಯೋಗದ ಆಯುಕ್ತ ಡಾ.ಮನೋಜ್ ರಾಜನ್ ಅವರು ಮಾಹಿತಿ ನೀಡಿ, ಮುಂದಿನ ಒಂದು ವಾರಗಳ ಕಾಲ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಭೂಕುಸಿತ ಪ್ರದೇಶಗಳಲ್ಲಿನ ಜನರಿಗೆ ಮಾಹಿತಿ ನೀಡಿ, ಸ್ಥಳಾಂತರಿಸಬೇಕು. ಸಹಾಯವಾಣಿ ಕೇಂದ್ರಗಳು ಸಂಪರ್ಕದಲ್ಲಿರಬೇಕು. ಎಸ್‍ಡಿಆರ್‍ಎಫ್, ಎನ್‍ಡಿಆರ್‍ಎಫ್ ಹಾಗೂ ಅಧಿಕಾರಿಗಳ ತಂಡಗಳು ಎಚ್ಚರ ಇರಬೇಕು ಎಂದು ತಿಳಿಸಿದರು.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು, ತುಮಕೂರು, ಬೆಳಗಾವಿ ಜಿಲ್ಲೆಗಳ ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಯಲ್ಲಿ ಮಳೆಯಿಂದ ಮನೆ ಹಾನಿ ಪರಿಹಾರ ಮತ್ತಿತರ ಬಗ್ಗೆ ಮಾಹಿತಿ ನೀಡಿದರು.
ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ, ಅಪರ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಲೋಕೋಪಯೋಗಿ ಇಲಾಖೆ ಇಇ ನಾಗರಾಜು, ತಹಶೀಲ್ದಾರ್ ಪಿ.ಎಸ್.ಮಹೇಶ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾರಾಯಣ ರೆಡ್ಡಿ, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರಾದ ಅನನ್ಯ ವಾಸುದೇವ್ ಇತರರು ಇದ್ದರು.

ಅಧಿಕಾರಿಗಳ ಜತೆ ಚರ್ಚೆ

ವಿಡಿಯೋ ಸಂವಾದ ಬಳಿಕ ಅಧಿಕಾರಿಗಳ ಜೊತೆ ಚರ್ಚಿಸಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು, ಮುಂದಿನ ಹತ್ತು-ಹದಿನೈದು ದಿನಗಳ ಕಾಲ ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇರುವುದರಿಂದ ಈಗಾಗಲೇ ಗುರುತಿಸಲಾಗಿರುವ 43 ಗ್ರಾಮಗಳ ಸೂಕ್ಷ್ಮ ಪ್ರದೇಶದಲ್ಲಿ ಅಗತ್ಯ ಮುನ್ನೆಚ್ಚರ ವಹಿಸಬೇಕಿದೆ ಎಂದರು.
ಲೋಕೋಪಯೋಗಿ ಮತ್ತು ಪಂಚಾಯತ್ ರಾಜ್ ಹಾಗೂ ಸೆಸ್ಕ್ ವಿಭಾಗಗಳು ಅಗತ್ಯ ಮೂಲಸೌಲಭ್ಯ ಸಂಬಂಧ ಹೆಚ್ಚಿನ ಗಮನಹರಿಸುವಂತೆ ಸೂಚಿಸಿದರು.
ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ ಅವರು ಎರಡನೇ ಮೊಣ್ಣಂಗೇರಿ ಮತ್ತು ತೋರ ಗ್ರಾಮಗಳಲ್ಲಿನ ಜನರನ್ನು ಹೆಚ್ಚಿನ ಮಳೆಯಾದಲ್ಲಿ ಸ್ಥಳಾಂತರಿಸಬೇಕಿದೆ ಎಂದರು.

ಹೆಚ್ಚಿನ ಎಚ್ಚರ ವಹಿಸಬೇಕಿದೆ
ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರಾದ ಅನನ್ಯ ವಾಸುದೇವ್ ಅವರು, ಈ ಬಾರಿ ಗಾಳಿಬೀಡು, ಮದೆ, ಕರ್ಣಂಗೇರಿ ಮತ್ತಿತರ ಗ್ರಾ.ಪಂ.ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಾಗಿದ್ದು, ಇಂತಹ ಕಡೆಗಳಲ್ಲಿ ಹೆಚ್ಚಿನ ಗಮನಹರಿಸಬೇಕಿದೆ. ಜೊತೆಗೆ ಆಗಸ್ಟ್15 ರ ವರೆಗೆ ಹೆಚ್ಚಿನ ಎಚ್ಚರ ವಹಿಸಬೇಕಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!