ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸ ಮೊಬೈಲ್ ಫೋನ್ ನೊಂದಿಗೆ ಕೈಪಿಡಿಯನ್ನು ನೀಡದ್ದಕ್ಕಾಗಿ ಬೆಂಗಳೂರು ನಿವಾಸಿಗೆ ವ್ಯಾಜ್ಯ ವೆಚ್ಚಕ್ಕಾಗಿ ರೂ. 1,000 ದೊಂದಿಗೆ ರೂ.5,000 ಪರಿಹಾರವನ್ನು ನೀಡುವಂತೆ ಎಲೆಕ್ಟ್ರಾನಿಕ್ಸ್ ದೈತ್ಯ OnePlus ಇಂಡಿಯಾ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಗೆ ಗ್ರಾಹಕ ನ್ಯಾಯಾಲಯ ಆದೇಶಿಸಿದೆ.
ಕಂಪನಿಯದ್ದು ನಿರ್ಲಕ್ಷ್ಯ ಮತ್ತು ಉದಾಸೀನತೆಯ ಕ್ರಮವಾಗಿದೆ ಎಂದು ಬೆಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಹೇಳಿದೆ ಎನ್ನಲಾಗಿದೆ.
ಡಿಸೆಂಬರ್ 6, 2023 ರಂದು 24,598 ರೂ.ಗೆ OnePlus Nord CE 3 ಮೊಬೈಲ್ ಫೋನ್ ಅನ್ನು ಖರೀದಿಸಿದ ಸಂಜಯ್ ನಗರದ ನಿವಾಸಿ ಎಸ್‌ಎಂ ರಮೇಶ್ ಅವರ ಪ್ರಕರಣ ಇದಾಗಿದೆ. ಅವರಿಗೆ ಬಳಕೆದಾರರ ಕೈಪಿಡಿಯನ್ನು ನೀಡಿಲ್ಲ. ಇದರಿಂದಾಗಿ ಅವರಿಗೆ ಫೋನ್‌ನ ವೈಶಿಷ್ಟ್ಯಗಳು, ಗ್ಯಾರಂಟಿ ವಿವರ, ಕಂಪನಿಯ ವಿಳಾಸ ಮತ್ತಿತರ ಮಾಹಿತಿ ಸಿಗದಂತಾಗಿದೆ.
ಗ್ರಾಹಕನ ಪುನರಾವರ್ತಿತ ದೂರುಗಳ ಹೊರತಾಗಿಯೂ, OnePlus ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಅಂತಿಮವಾಗಿ ಏಪ್ರಿಲ್ 2024 ರಲ್ಲಿ ಖರೀದಿಯ ನಾಲ್ಕು ತಿಂಗಳ ನಂತರ ಕೈಪಿಡಿ ತಲುಪಿದೆ. ಇದರಿಂದ ತೃಪ್ತರಾಗದ ಗ್ರಾಹಕ ಜೂನ್ 3ರಂದು ‘ಸೇವೆಯಲ್ಲಿ ಲೋಪವಿದೆ’ ಎಂದು ಆರೋಪಿಸಿ ಕಾನೂನು ದೂರು ದಾಖಲಿಸಿದ್ದರು.