August 26, 2026
Wednesday, August 26, 2026
spot_img

ಮೆಕ್ಕೆಜೋಳ ಬೆಳೆ ನಷ್ಟಕ್ಕೆ ಶೀಘ್ರವೇ ಸಿಗಲಿದೆ ಪರಿಹಾರ: ರೈತರಿಗೆ ಸಚಿವ ಶಿವಲಿಂಗೇಗೌಡ ಭರವಸೆ

ಹೊಸದಿಗಂತ ವರದಿ ಹಾಸನ:

ಹಾಸನ ಜಿಲ್ಲೆಯಲ್ಲಿ ಮೆಕ್ಕೆಜೋಳಕ್ಕೆ ಬಿಳಿಸುಳಿ ರೋಗ ಕಾಣಿಸಿಕೊಂಡು ಸುಮಾರು 70 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ಈ ಕುರಿತು ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಲಾಗಿದ್ದು, ರೈತರಿಗೆ ಪರಿಹಾರ ಕೊಡಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗಮನ ಸೆಳೆಯಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬರ ಪರಿಸ್ಥಿತಿಯ ಅಧ್ಯಯನ ನಡೆಸಲಾಗಿದೆ. ಬಿತ್ತನೆಯಾದ ಬೆಳೆಗಳೂ ರೋಗದಿಂದ ನಾಶವಾಗಿವೆ. ರೈತರ ಸಂಕಷ್ಟದ ಕುರಿತು ಸದನದಲ್ಲಿ ಚರ್ಚಿಸಲು ಸಿದ್ಧರಿದ್ದರೂ ಸದನದ ಕಲಾಪ ನಡೆಯದ ಹಿನ್ನೆಲೆಯಲ್ಲಿ ಸಮಸ್ಯೆ ಕುರಿತು ಸಮಗ್ರ ಚರ್ಚೆ ಸಾಧ್ಯವಾಗಲಿಲ್ಲ ಎಂದರು.

ಹಾಸನ ಜಿಲ್ಲೆಗೆ ಸಂಬಂಧಿಸಿದ ನಾಲ್ಕು ಪ್ರಮುಖ ಯೋಜನೆಗಳನ್ನು ಪೂರ್ಣಗೊಳಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿರುವುದಾಗಿ ತಿಳಿಸಿದರು. ಭೂಸ್ವಾಧೀನ ನಡೆದಿದ್ದರೂ ಐಐಟಿ ಮಂಜೂರಾಗಿಲ್ಲ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ನೂತನ ಜಿಲ್ಲಾಧಿಕಾರಿ ಕಚೇರಿ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿವೆ. ಈ ಯೋಜನೆಗಳಿಗೆ ಹಣ ಬಿಡುಗಡೆ ಸೇರಿದಂತೆ ನಾಲ್ಕು ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಮುಂದಿಟ್ಟಿದ್ದು, ಉತ್ತಮ ಸ್ಪಂದನೆ ದೊರೆತಿದೆ ಎಂದರು.

ಡಿಸಿ ವಿರುದ್ಧದ ಆರೋಪಕ್ಕೆ ಕೆಎಂಶಿ ತಿರುಗೇಟು: ತಪ್ಪಿದ್ದರೆ ದಾಖಲೆ ಸಮೇತ ಹೇಳಲಿ

ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ವಿರುದ್ಧ ಮಾಜಿ ಸಚಿವ ಎಚ್.ಡಿ. ರೇವಣ್ಣ ಮಾಡಿರುವ ಆರೋಪಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ತಿರುಗೇಟು ನೀಡಿದ್ದಾರೆ. ಜಿಲ್ಲಾಧಿಕಾರಿ ಮಾಡಿರುವುದು ಕಾನೂನಿಗೆ ವಿರುದ್ಧವಾಗಿದೆ ಎಂದು ಆರೋಪಿಸುವುದಾದರೆ ದಾಖಲೆ ಸಮೇತ ಹೇಳಲಿ. ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಅವರು ಅನುಭವಿಸುತ್ತಾರೆ. ಆದರೆ ಜಿಲ್ಲಾಧಿಕಾರಿ ಬಗ್ಗೆ ಏಕವಚನದಲ್ಲಿ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.

ತಹಶೀಲ್ದಾರ್ ಕಳುಹಿಸಿದ ವರದಿಯೇ ಅಂತಿಮವಲ್ಲ. ಅದರಲ್ಲಿ ತಪ್ಪುಗಳಿದ್ದರೆ ಜಿಲ್ಲಾಧಿಕಾರಿ ಅದನ್ನು ಸರಿಪಡಿಸಿ ಮಂಡಿಸಬಹುದು. ಜಿಲ್ಲಾಧಿಕಾರಿಯವರು ಕಾನೂನಾತ್ಮಕವಾಗಿ ಮೀಸಲಾತಿ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡರು. ಜಿಲ್ಲಾಧಿಕಾರಿ ತಪ್ಪು ಮಾಡಿದ್ದರೆ ತನಿಖೆ ನಡೆಸಲಿ. ಅದನ್ನು ಬಿಟ್ಟು ಜಿಲ್ಲಾಡಳಿತವನ್ನೇ ದೋಷಪೂರಿತವಾಗಿ ನೋಡುವುದು ಸರಿಯಲ್ಲ ಎಂದರು.

ಜಿಲ್ಲಾಧಿಕಾರಿಯನ್ನು ಹೆದರಿಸಿ ರಾಜಕಾರಣ ಮಾಡಲು ಸಾಧ್ಯವಿಲ್ಲ. ಜಿಲ್ಲಾ ಉಸ್ತುವಾರಿ ಸಚಿವನಾಗಿ ಜಿಲ್ಲಾಧಿಕಾರಿಗೆ ಆತ್ಮಸ್ಥೈರ್ಯ ತುಂಬುವುದು ಹಾಗೂ ಅವರ ಬೆಂಬಲಕ್ಕೆ ನಿಲ್ಲುವುದು ತಮ್ಮ ಕರ್ತವ್ಯ ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !