ಮಡಿಕೇರಿಯಲ್ಲಿ ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ದೂರು

ಹೊಸದಿಗಂತ ವರದಿ, ಮಡಿಕೇರಿ:

ಕಲಬುರ್ಗಿಯಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಬಸವನ ಗೌಡ ಪಾಟೀಲ್ ಯತ್ನಾಳ್ ಅವರು ಮುಸಲ್ಮಾನರ ವಿರುದ್ಧ ದ್ವೇಷ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಮತ್ತು ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಜಿಲ್ಲಾಧಿಕಾರಿ ವೆಂಕಟ್ ರಾಜಾ ಹಾಗೂ ಜಿಲ್ಲಾ ಪೊಲೀಸ್ ಹೆಚ್ಚುವರಿ ವರಿಷ್ಠಾಧಿಕಾರಿ ಸುಂದರ್ ರಾಜ್ ಅವರಿಗೆ ದೂರು ನೀಡಿದೆ.

ಜಿಲ್ಲಾ ಕಾಂಗ್ರೆಸ್ ಸಮಿತಿಯ ಸದಸ್ಯ ಎಂ.ಎ.ಖಲೀಲ್ ಬಾಷಾ, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಮಡಿಕೇರಿ ಬ್ಲಾಕ್ ಅಧ್ಯಕ್ಷ ಕೆ.ಜಿ.ಪೀಟರ್, ಉಪಾಧ್ಯಕ್ಷ ಎಂ.ಬಿ.ಕೌಸರ್, ಖಜಾಂಚಿ ಎಂ.ಹೆಚ್.ಅಜೀಜ್ ಹಾಗೂ ನಗರ ಸಂಘಟನಾ ಕಾರ್ಯದರ್ಶಿ ಎಂ.ಎಂ.ಅಬ್ದುಲ್ ಅಜೀಜ್ ಅವರುಗಳು ದೂರು ನೀಡಿ ಯತ್ನಾಳ್ ಅವರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವುದರಿಂದ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಮುಸ್ಲಿಮರನ್ನು ಕಲ್ಲಿನಿಂದ ಹೊಡೆಯಿರಿ ಎಂದು ಪ್ರಚೋದನಾಕಾರಿ ಭಾಷಣ ಮಾಡಿರುವ ಯತ್ನಾಳ್ ಅವರು ಹಿಂದೂ ಹಾಗೂ ಮುಸ್ಲಿಂ ಸಮುದಾಯಗಳ ನಡುವೆ ದ್ವೇಷವನ್ನು ಬಿತ್ತುತ್ತಿದ್ದಾರೆ. ಚುನಾವಣೆಗೂ ಮೊದಲು ಕೋಮು ಸೌಹಾರ್ದತೆಗೆ ಭಂಗ ತರುವ ಮತ್ತು ನ್ಯಾಯಯುತ ಚುನಾವಣೆ ನಡೆಯದಂತೆ ಮಾಡುವ ಪ್ರಯತ್ನದಲ್ಲಿದ್ದಾರೆ. ಕಾನೂನು ಬಾಹಿರ ಹೇಳಿಕೆಯ ಪ್ರತಿಗಳನ್ನು ಯತ್ನಾಳ್ ಅವರ ಹಿಂಬಾಲಕರು ಮಡಿಕೇರಿಯಲ್ಲಿ ವ್ಯಾಪಕವಾಗಿ ಹಂಚುತ್ತಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿಯೂ ಪ್ರಸಾರ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ದ್ವೇಷ ಭಾಷಣ ಮಾಡುವವರ ವಿರುದ್ಧ ಸ್ವಯಂಪ್ರೇರಿತ ಕೇಸು ದಾಖಲಿಸಲು ಆದೇಶವಿದೆ. ಪ್ರಚೋದನಾಕಾರಿ ಭಾಷಣದ ಮೂಲಕ ಯತ್ನಾಳ್ ಅವರು ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಾರೆ. ಆದ್ದರಿಂದ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಶಿಕ್ಷೆಗೆ ಗುರಿ ಪಡಿಸಬೇಕೆಂದು ಪ್ರಮುಖರು ಆಗ್ರಹಿಸಿದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!