ಮಂಡ್ಯದಲ್ಲಿ ಎಚ್.ಡಿ. ಕುಮಾರಸ್ವಾಮಿ ಬೃಹತ್ ರೋಡ್ ಶೋ

ಹೊಸದಿಗಂತ ವರದಿ, ಮಂಡ್ಯ:

ಮಂಡ್ಯ ನಗರ ಹಾಗೂ ಮದ್ದೂರು ತಾಲ್ಲೂಕಿನ ಕೊಪ್ಪ ಹೋಬಳಿಯಲ್ಲಿ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಬುಧವಾರ ಜಾ.ದಳ-ಬಿಜೆಪಿ ಮೈತ್ರಿ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಬೃಹತ್ ರೋಡ್ ಶೋ ನಡೆಸಿದರು.

ಮಂಡ್ಯದ ಮಂಡ್ಯ ವಿಶ್ವವಿದ್ಯಾಲಯದ ಎದುರಿನಿಂದ ರಾಜ್ಯ ಯುವ ಜಾ.ದಳ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಶಾಸಕ ಜಿ.ಬಿ. ಶಿವಕುಮಾರ್, ಜಾ.ದಳ ಮುಖಂಡರಾದ ಬಿ.ಆರ್. ರಾಮಚಂದ್ರು, ಅಮರಾವತಿ ಚಂದ್ರಶೇಖರ್, ಸುರೇಶ್, ಬಿಜೆಪಿ ಮುಖಂಡರಾದ ಅಶೋಕ್ ಜಯರಾಮ್, ಚಂದಗಾಲು ಶಿವಣ್ಣ, ಸಿ.ಟಿ. ಮಂಜುನಾಥ್ ಸೇರಿದಂತೆ ಹಲವು ಮುಖಂಡರ ನೇತೃತ್ವದಲ್ಲಿ ಬೃಹತ್ ರೋಡ್ ಶೋ ಆರಂಭಿಸಿ, ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ನೆರೆದಿದ್ದ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದರು.

ವಿವಿಧ ಗ್ರಾಮಗಳಿಂದ ರೈತರು ಎತ್ತಿನಗಾಡಿಗಳಲ್ಲಿ ಮಂಡ್ಯ ನಗರಕ್ಕೆ ಆಗಮಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡರೆ, ಜಾ.ದಳ ಹಾಗೂ ಬಿಜೆಪಿ ಕಾರ್ಯಕರ್ತರು ಬೈಕ್ ಜಾಥಾ ನಡೆಸಿದರು.

ಕಾವೇರಿ ನೀರು ಮಾರಿಕೊಂಡಿದೆ:
ಜಯಚಾಮರಾಜೆಂದ್ರ ಒಡೆಯರ್ ವೃತ್ತದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಎಚ್‌ಡಿಕೆ, ರಾಜ್ಯದ ಕಾಂಗ್ರೆಸ್ ಸರ್ಕಾರ ಕಾವೇರಿ ನೀರನ್ನು ತನ್ನ ರಾಜಕೀಯ ಸ್ವಾರ್ಥಕ್ಕಾಗಿ ನೆರೆಯ ತಮಿಳುನಾಡು ರಾಜ್ಯಕ್ಕೆ ಮಾರಾಟ ಮಾರಿಕೊಂಡಿದೆ ಎಂದು ಆರೋಪಿಸಿದರು.
ಇಲ್ಲಿ ಮೇಕೆದಾಟು ತರುತ್ತೇವೆ ಎನ್ನುತ್ತಾರೆ, ಕಾವೇರಿಯನ್ನು ಕಾಪಾಡುತ್ತೇವೆ ಎಂದು ಹೇಳುತ್ತಾರೆ. ಆದರೆ, ತಮಿಳುನಾಡಿನಲ್ಲಿ ಮೇಕೆದಾಟು ವಿರೋಧಿ ಆಗಿರುವ ಡಿಎಂಕೆ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ರಾಜಕೀಯ ಸ್ವಾರ್ಥಕ್ಕಾಗಿ ಸ್ಟಾಲಿನ್ ಅವರನ್ನು ಓಲೈಕೆ ಮಾಡುತ್ತಿದೆ ಎಂದು ಟೀಕಾ ಪ್ರಹಾರ ನಡೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!