6 ಅಲ್ಲ 3 ತಿಂಗಳಲ್ಲಿ ಅದಾನಿ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಿ: ಸೆಬಿಗೆ ಸುಪ್ರೀಂ ಕೋರ್ಟ್ ಸೂಚನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಅದಾನಿ ಗ್ರೂಪ್ ಹಿಂಡನ್ಬರ್ಗ್ ರಿಸರ್ಚ್ ಪ್ರಕರಣ (Adani-Hindenburg Case) ಸಂಬಂಧ ತನಿಖೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ತನಿಖೆಯ ಸ್ಥಿತಿಗತಿಯ ವರದಿಯನ್ನು ಆಗಸ್ಟ್ 14 ರಂದು ನೀಡುವಂತೆ ಸೆಬಿಗೆ (SEBI) ಸೂಚಿಸಿದೆ.

ಮುಖ್ಯ ನ್ಯಾಯಮೂರ್ತಿ (CJI) ಡಿವೈ ಚಂದ್ರಚೂಡ್ (DY Chandrachud), ನ್ಯಾಯಮೂರ್ತಿಗಳಾದ ಪಿಎಸ್ ನರಸಿಂಹ ಮತ್ತು ಜೆಬಿ ಪರ್ದಿವಾಲಾ ಅವರ ಪೀಠವು ತನಿಖೆ ನಡೆಸಲು 6 ತಿಂಗಳು ಹೆಚ್ಚಿನ ಕಾಲಾವಕಾಶಕ್ಕಾಗಿ ಸೆಬಿ (SEBI) ಕೋರಿಕೆ ಮನವಿಯನ್ನುನಿರಾಕರಿಸಿದೆ. 6 ತಿಂಗಳು ಬದಲು 3 ತಿಂಗಳು ಮಾತ್ರ ಹೆಚ್ಚಿನ ಕಾಲಾವಕಾಶ ಪಡೆದು ತನಿಖೆ ಪೂರ್ಣಗೊಳಿಸಿ ತನಗೆ ವರದಿ ಸಲ್ಲಿಸಬೇಕೆಂದು ಆದೇಶಿಸಿದೆ.

ಅಮೆರಿಕದ ಶಾರ್ಟ್ ಸೆಲ್ಲರ್ ಕಂಪನಿ ಹಿಂಡನ್ಬರ್ಗ್ ರಿಸರ್ಚ್ ಜನವರಿ ತಿಂಗಳಲ್ಲಿ ಅದಾನಿ ಗ್ರೂಪ್ ಸಂಸ್ಥೆಗಳ ವಿರುದ್ಧ ಹಲವು ಗಂಭೀರ ಆರೋಪಗಳಿರುವ ತನಿಖಾ ವರದಿಯನ್ನು ಬಿಡುಗಡೆ ಮಾಡಿತ್ತು.

ಇದಾದ ಬಳಿಕ ಸುಪ್ರೀಮ್ ಕೋರ್ಟ್ ಈ ಪ್ರಕರಣದ ತನಿಖೆ ನಡೆಸಿ ವರದಿ ನೀಡುವಂತೆ ಸೆಬಿಗೆ ಹೊಣೆ ಹೊರಿಸಿ 2 ತಿಂಗಳು ಗಡುವು ನೀಡಿತು. ಏಪ್ರಿಲ್​ಗೆ ಈ ಗಡುವು ಮುಗಿದಿದೆ. ಆದರೆ, ತನಗೆ ಇನ್ನೂ 6 ತಿಂಗಳು ಹೆಚ್ಚಿನ ಕಾಲಾವಕಾಶ ಬೇಕು ಎಂದು ಸೆಬಿ ಕೋರಿಕೊಂಡಿತು. ಹಿಂಡನ್ಬರ್ಗ್ ರಿಸರ್ಚ್ ಕಂಪನಿಯ ವರದಿಯಲ್ಲಿರುವ ಆರೋಪಗಳ ಪೈಕಿ 12 ಆರೋಪಗಳು ಬಹಳ ಸಂಕೀರ್ಣದ್ದಾಗಿದ್ದು, ತನಿಖೆಗೆ ಹೆಚ್ಚು ಸಮಯ ಬೇಕಾಗುತ್ತದೆ ಎಂದು ವಾದಿಸಿದ್ದ ಸೆಬಿ, ಅಮೆರಿಕದಲ್ಲಿ ಇಂಥ ಪ್ರಕರಣಗಳ ತನಿಖೆಗೆ ಸರಾಸರಿ 2 ವರ್ಷ ಆಗುವುದನ್ನು ಉದಾಹರಿಸಿತು. ಆದರೆ, ಸುಪ್ರೀಂ ಕೋರ್ಟ್ 6 ತಿಂಗಳ ಬದಲು 3 ತಿಂಗಳು ಹೆಚ್ಚುವರಿ ಕಾಲಾವಕಾಶಕ್ಕೆ ಮಾತ್ರ ಸಮ್ಮತಿ ನೀಡಿದೆ.

ಇನ್ನು, ಬೇಸಿಗೆ ರಜೆ ಬಳಿಕ ಜುಲೈ 11ರಂದು ನ್ಯಾಯಪೀಠ ಮತ್ತೊಮ್ಮೆ ಈ ಪ್ರಕರಣದ ಸ್ಥಿತಿಗತಿಯ ವಿಚಾರಣೆ ನಡೆಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!