ಹೊಸದಿಗಂತ ವರದಿ, ಹುಬ್ಬಳ್ಳಿ:
ದಿನದ ೨೪ ತಾಸು ಕಾರ್ಯ ಪ್ರವೃತರಾಗಿ, ಸ್ಮಾರ್ಟ್ ಸಿಟಿ ಯೋಜನೆಯ ಎಲ್ಲ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅಧಿಕಾರಿಗಳಿಗೆ ತಿಳಿಸಿದರು.
ನಗರದಲ್ಲಿ ಸೋಮವಾರ ಸ್ಮಾರ್ಟ್‌ಸಿಟಿ ಯೋಜನೆಯಡಿ ನಡೆಯುತ್ತಿರುವ ಬಸ್ ನಿಲ್ದಾಣ, ತೋಳನ ಕೇರೆ ಸೇರಿದಂತೆ ವಿವಿಧ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಪ್ರವಾಸ ಮಂದಿರದಲ್ಲಿ ಅಧಿಕಾರಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.
ಕೊರೋನಾದಿಂದ ಕಾಮಗಾರಿ ವಿಳಂಬವಾಗಿವೆ. ಆದರೆ ಈಗ ಯಾವುದೇ ಸಮಸ್ಯೆಯಿಲ್ಲ. ಎಪ್ರಿಲ್ ತಿಂಗಳ ಕೊನೆಯಲ್ಲಿ ೫೫ ಕಾಮಗಾರಿಗಳನ್ನು ಮುಗಿಸಬೇಕು. ಉಳಿದ ೪ ಕಾಮಗಾರಿ ಈಗ ಪ್ರಾರಂಭವಾದ ಕಾರಣ ಡಿಸೆಂಬರ್ ಅಂತ್ಯದೊಳಗೆ ಅಂತಿಮ ಸ್ಪರ್ಷ ನೀಡಬೇಕು ಎಂದು ಸೂಚಿಸಿದರು.
ವ್ಯವಸ್ಥಿತ ಯೋಜನೆಯಿಲ್ಲದೆ ಕೆಲವು ಪ್ರದೇಶಗಳಲ್ಲಿ ಕಾಮಗಾರಿ ನಡೆದಿವೆ. ಇದರಿಂದ ವಾಹನ ಸವಾರರಿಗೆ ಮತ್ತು ಜನರಿಗೆ ತೊಂದರೆಯಾಗುತ್ತಿದೆ. ಕಾಮಗಾರಿ ನಡೆಯುತ್ತಿರವ ಪ್ರದೇಶಗಳನ್ನು ಪೊಲೀಸ್ ಸಹಕಾರದಿಂದ ಬಂದ್ ಮಾಡಿಸಿ ಸಾರ್ವಜನಿಕರಿಗೆ ಬೇರೆ ಮಾರ್ಗ ಕಲ್ಪಿಸುವ ಮೂಲಕ ಓಡಾಡಲು ಅನುಕೂಲ ಮಾಡಿಕೊಡಬೇಕು. ಎಲ್ಲ ಇಲಾಖೆ ಜೊತೆ ಹಾಗೂ ಸಾರ್ವಜನಿಕರ ಜೊತೆ ಸಮನ್ವಯ ಕಾಯ್ದುಕೊಳ್ಳಬೇಕು. ಕೈಗೆತ್ತಿಕೊಂಡ ಕಾಮಗಾರಿ ಬೇಗ ಮುಗಿಸಬೇಕು ಎಂದರು.
ಶಾಸಕ ಜಗದೀಶ ಶೆಟ್ಟರ ಮಾತನಾಡಿ, ನಡೆದಿರುವಂತಹ ಕಾಮಗಾರಿಗಳನ್ನು ಮುಗಿಸಿಲು ಗುತ್ತಿಗೆದಾರರಿಗೆ ಸೂಚಿಸಬೇಕು. ರಾತ್ರಿ ಸಮಯದಲ್ಲಿ ಹೆಚ್ಚು ಕೆಲಸ ಮಾಡುವುದರಿಂದ ಅನುಕೂಲವಾಗುತ್ತದೆ. ದಿನದ ೨೪ ತಾಸು ಕೆಲಸ ಮಾಡಬೇಕು. ರಸ್ತೆಯಲ್ಲಿ ಬಿದ್ದಿರುವ ಕಚ್ಚಾ ಸಾಮಗ್ರಿಗಳನ್ನು ತಕ್ಷಣ ತೆರವುಗೊಳಿಸಬೇಕು. ಸಾರ್ವಜನಿಕರಿಂದ ಆರೋಪ ಬರುವುದರ ಒಳಗೆ ಎಚ್ಚೆತ್ತುಕೊಳ್ಳಬೇಕು ಎಂದು ಸೂಚಿಸಿದರು.
ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಕೀಲ ಅಹ್ಮದ್ ಮಾತನಾಡಿ, ಒಂದು ತಿಂಗಳಲ್ಲಿ ೯ ಕಾಮಗಾರಿ ಮುಗಿಯಲಿವೆ. ೫೫ ಕಾಮಗಾರಿ ಏಪ್ರಿಲ್ ಒಳಗಡೆ ಮುಕ್ತಾಯಗೊಳಲಿದ್ದು, ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಚಿಟಗುಪ್ಪಿ ಆಸ್ಪತ್ರೆ, ಬಸ್ ನಿಲ್ದಾಣ, ಉಣಕಲ್ ಉದ್ಯಾನವ ಡಿಸೆಂಬರ್ ಒಳಗೆ ಮುಗಿಸಲಾಗುತ್ತದೆ ಎಂದು ಹೇಳಿದರು.
ಪಾಲಿಕೆ ಆಯುಕ್ತ ಸುರೇಶ ಇಟ್ನಾಳ್, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪ ನಿರ್ದೇಶಕ ಗುರುದತ್ತ ಹೆಗಡೆ ಇದ್ದರು.