Wednesday, December 6, 2023

Latest Posts

ಆಧ್ಯಾತ್ಮದಿಂದ ಮಾನಸಿಕ ನೆಮ್ಮದಿ: ಹಾವಗಿಲಿಂಗೇಶ್ವರ ಶಿವಾಚಾರ್ಯ

ಹೊಸದಿಗಂತ ವರದಿ, ಬೀದರ್:

ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ಶಾಂತಿ, ನೆಮ್ಮದಿ ದೊರಕುತ್ತದೆ ಎಂದು ಹಲಬರ್ಗಾದ ಹಾವಗಿಲಿಂಗೇಶ್ವರ ಶಿವಾಚಾರ್ಯ ಹೇಳಿದರು.
ಸಿದ್ಧರಾಮೇಶ್ವರ ಜಾತ್ರೆ ಪ್ರಯುಕ್ತ ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದ ರಾಚೋಟೇಶ್ವರ ಮಠದಲ್ಲಿ ನಡೆದ ಧರ್ಮ ಸಭೆಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಶರಣರು, ಸಂತರ ವಾಣಿಗಳ ಆಲಿಕೆಯು ಮನದ ಮೈಲಿಗೆ ದೂರ ಮಾಡುತ್ತದೆ. ಸನ್ಮಾರ್ಗದಲ್ಲಿ ಮುನ್ನಡೆಸುತ್ತದೆ ಎಂದು ತಿಳಿಸಿದರು.
ಗುರು ಅಜ್ಞಾನದಿಂದ ಸುಜ್ಞಾನದೆಡೆಗೆ ಒಯ್ಯುತ್ತಾನೆ. ಧರ್ಮದ ಮಾರ್ಗ ತೋರುತ್ತಾನೆ. ಹರ ಮುನಿದರೂ ಕಾಯುತ್ತಾನೆ. ಹೀಗಾಗಿ ಗುರುವಿನ ಸೇವೆ ಮಾಡುವುದರಿಂದ ಜೀವನ ಪಾವನವಾಗುತ್ತದೆ ಎಂದು ಹೇಳಿದರು.
ರಾಚೋಟೇಶ್ವರ ಮಠವು ಸಿದ್ಧರಾಮೇಶ್ವರರು ಜೀವಂತ ಸಮಾಧಿ ಪಡೆದ ಸ್ಥಳವಾಗಿದೆ. ಇಲ್ಲಿ ಭಕ್ತಿಯಿಂದ ಪ್ರಾರ್ಥಿಸಿದರೆ ಭಕ್ತರ ಎಲ್ಲ ಸಂಕಷ್ಟಗಳು ಪರಿಹಾರಗೊಳ್ಳುತ್ತವೆ ಎಂದು ತಿಳಿಸಿದರು.
‘ಜೀವನ ದರ್ಶನ’ ಕುರಿತು ಪ್ರವಚನ ನೀಡಿದ ಶಿರೂರಿನ ಜಯಸಿದ್ಧೇಶ್ವರ ಸ್ವಾಮೀಜಿ ಅವರು, ಹಾವಗಿಲಿಂಗೇಶ್ವರ ಶಿವಾಚಾರ್ಯರ ಸಂಕಲ್ಪದಿಂದಾಗಿ ರಾಚೋಟೇಶ್ವರ ಮಠ ಮಾದರಿ ಮಠವಾಗಿ ರೂಪುಗೊಂಡಿದೆ. ಹಲಬರ್ಗಾ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಆಧ್ಯಾತ್ಮದ ವಾತಾವರಣ ಸೃಷ್ಟಿಸಿದೆ ಎಂದು ಹೇಳಿದರು.
ಪತ್ರಕರ್ತರಾದ ಅಶೋಕ ರಾಜೋಳೆ, ಜಯರಾಜ ದಾಬಶೆಟ್ಟಿ, ನಾಗೇಶ ಪ್ರಭಾ, ಬಸವರಾಜ ಪ್ರಭಾ, ಸಂತೋಷ ಬಿ.ಜಿ. ಪಾಟೀಲ ಅವರನ್ನು ಸನ್ಮಾನಿಸಲಾಯಿತು.
ಹೈದರಾಬಾದ್‍ನ ಶಿವಾಜಿರಾವ್ ಉಚ್ಚೆ, ಶ್ರೀಕಾಂತ ಕುಡತೆ, ಕೆ. ಜಗನ್ನಾಥ ಚಿಟ್ಟೆ, ಬೀರಿ(ಕೆ) ಗ್ರಾಮದ ರಮೇಶ ಮೇತ್ರೆ, ಶರಣಪ್ಪ ಬಿರಾದಾರ, ಜಾನಪದ ಗಾಯಕ ಜಗನ್ನಾಥ ಬಿರಾದಾರ, ಹಜನಾಳದ ಅನಿಲಕುಮಾರ ಸಕ್ರೆಪ್ಪ, ಗೋಧಿಹಿಪ್ಪರ್ಗಾದ ಸುಭಾಷ್ ಪಾಟೀಲ, ಬಸವರಾಜ ಹಡಪಳ್ಳೆ ಉಪಸ್ಥಿತರಿದ್ದರು.
ನಿವೃತ್ತ ಶಿಕ್ಷಕ ರೇವಣಪ್ಪ ಮೂಲಗೆ ನಿರೂಪಿಸಿದರು. ಇದಕ್ಕೂ ಮುನ್ನ ಡಾ. ರಜನಿಶ್ ಚನಶೆಟ್ಟಿ ಹಾಗೂ ಡಾ. ಸಂಗಮೇಶ ಮಂಗಲಗಿ ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!