ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಖಂಡನೆ : ವುಮೆನ್ ಇಂಡಿಯಾ ಮೂಮೆಂಟ್ ಪ್ರತಿಭಟನೆ

ಹೊಸದಿಗಂತ ವರದಿ ಮಡಿಕೇರಿ:

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ವುಮೆನ್ ಇಂಡಿಯಾ ಮೂಮೆಂಟ್ (ಡಬ್ಲ್ಯು.ಐ.ಎಂ) ವತಿಯಿಂದ ಪ್ರತಿಭಟನೆ ನಡೆಯಿತು. ಮಡಿಕೇರಿ ನಗರದ ಇಂದಿರಾಗಾಂಧಿ ವೃತ್ತದಲ್ಲಿ ಜಮಾಯಿಸಿದ ಮಹಿಳಾ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.

ಮೂಮೆಂಟ್‍ನ ಅಧ್ಯಕ್ಷೆ ನಫೀಜಾ ಅಕ್ಬರ್ ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದಿನದಿಂದ ದಿನಕ್ಕೆ ಬೆಲೆ ಏರಿಸುವ ಮೂಲಕ ಜನರನ್ನು ಸಂಕಷ್ಟಕ್ಕೆ ತಳ್ಳಿದೆ. ಉದ್ಯೋಗ ಮತ್ತು ಆದಾಯವಿಲ್ಲದೆ ಪರದಾಡುತ್ತಿರುವ ಬಡ ಕುಟುಂಬಗಳು ಅತಂತ್ರ ಬದುಕನ್ನು ಸಾಗಿಸುತ್ತಿವೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಬೆಲೆ ಏರಿಕೆಯನ್ನು ನಿಯಂತ್ರಿಸಿ ಜನಸಾಮಾನ್ಯರಿಗೆ ಸಹಕಾರಿಯಾಗಬೇಕಾದ ಸರ್ಕಾರ ಹೊರೆಯಾಗುವ ಯೋಜನೆಗಳನ್ನು ಮತ್ತು ತೆರಿಗೆ ಪದ್ಧತಿಗಳನ್ನು ಜಾರಿಗೆ ತಂದು ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ ಎಂದು ಆರೋಪಿಸಿದರು.

ಬೆಲೆ ಏರಿಕೆಯಿಂದ ಸಂಕಷ್ಟ ಎದುರಿಸುತ್ತಿರುವ ಬಡವರು, ಕಾರ್ಮಿಕರು, ದುರ್ಬಲರು, ಹಿಂದುಳಿದ ವರ್ಗಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ವುಮೆನ್ ಇಂಡಿಯಾ ಮೂಮೆಂಟ್‍ನ ಉಪಾಧ್ಯಕ್ಷೆ ತನುಜಾವತಿ, ಕಾರ್ಯದರ್ಶಿ ಫೌಝಿಯಾ, ಖಜಾಂಚಿ ಹಾಜಿರಮ್ಮ, ಪ್ರಮುಖರಾದ ಮೇರಿ ವೇಗಸ್, ನೆಸಿಮಾ, ಮಹಿಳಾ ಹಕ್ಕುಗಳ ಹಿತರಕ್ಷಣಾ ವೇದಿಕೆಯ ಅಧ್ಯಕ್ಷೆ ಅನ್ಮಿಲಾ ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!