ತಮ್ಮ ಸ್ವಾರ್ಥಕ್ಕಾಗಿ ಸಂವಿಧಾನ ತಿದ್ದುಪಡಿ ಮಾಡಿದ ಕಾಂಗ್ರೆಸ್: ಸಂಸದ ಯದುವೀರ ಒಡೆಯರ್

ಹೊಸದಿಗಂತ ವರದಿ, ಚಿತ್ರದುರ್ಗ

ತಮ್ಮ ಪಕ್ಷ, ತಮ್ಮ ಖುರ್ಚಿ ಹಾಗೂ ತಮ್ಮ ಮತದಾರರ ರಕ್ಷಣೆಗಾಗಿ ಮಾತ್ರ ಕಾಂಗ್ರೆಸ್ ಪಕ್ಷ ಸಂವಿಧಾನ ತಿದ್ದುಪಡಿ ಮಾಡಿದೆ. ತಮ್ಮ ಸ್ವಾರ್ಥಕ್ಕಾಗಿ ಸಂವಿಧನ ತಿದ್ದುಪಡಿ ಮಾಡಲಾಗಿದೆ. ಈ ಕುರಿತು ಜನರು ಗಂಭೀರ ಚಿಂತನೆ ನಡೆಸಬೇಕಾದ ಅಗತ್ಯವಿದೆ ಎಂದು ಮೈಸೂರು ಸಂಸ್ಥಾನದ ಯುವರಾಜ ಹಾಗೂ ಮೈಸೂರು ಸಂಸದರಾದ ಯದುವೀರ ಒಡೆಯರ್ ಕರೆ ನೀಡಿದರು.

ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟೀಸ್ ಚಿತ್ರದುರ್ಗ ಸಂಘಟನೆ ವತಿಯಿಂದ ನಗರದ ತರಾಸು ರಂಗಮಂದಿರದಲ್ಲಿ ಸಂವಿಧಾನ ಬದಲಾಯಿಸಿದ್ದು ಯಾರು? ಎಂಬ ಪುಸ್ತಕ ಬಿಡುಗಡೆ ಹಾಗೂ ಸಂವಿಧಾನ ಸನ್ಮಾನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನ ಒಂದು ಶ್ರೇಷ್ಠ ಗ್ರಂಥ. ಇದನ್ನು ೧೯೫೧ರಲ್ಲೇ ನೆಹರು ತಿದ್ದುಪಡಿ ಮಾಡುವ ಮೂಲಕ ಮುಲಭೂತ ಹಕ್ಕುಗಳಿಗೆ ನಿಯಂತ್ರಣ ಹೇರಿದರು ಎಂದರು.

ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಸಂವಿಧಾನದ ಪೀಠಿಕೆ ತುಂಬಾ ಇಷ್ಟವಾದ ವಿಚಾರ. ಅದನ್ನು ಸಂವಿಧಾನದ ಆತ್ಮ ಎಂದು ಕರೆಯಲಾಗುತ್ತದೆ. ಆದರೆ ಇಂದಿರಾ ಗಾಂಧಿ ಇಂತಹ ಶ್ರೇಷ್ಠ ಗ್ರಂಥದ ಪೀಠಿಕೆಯನ್ನೇ ತಿದ್ದುಪಡಿ ಮಾಡಿದರು. ಆ ಮೂಲಕ ಸಂವಿಧಾನ ಹಾಗೂ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದರು. ಅಲ್ಲದೇ ೧೯೭೫ರಲ್ಲಿ ತಮ್ಮ ಅಧಿಕಾರ ಉಳಸಿಕೊಳ್ಳಲು ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿ ಮಾಡಿದರು. ಆ ಮೂಲಕ ಮಾಧ್ಯಮ ಕ್ಷೇತ್ರ ಸೇರಿದಂತೆ ಎಲ್ಲ ವಿರೋಧಿಗಳನ್ನು ಹತ್ತಿಕ್ಕುವ ಕೆಲಸ ಮಾಡಿದರು ಎಂದು ಹೇಳಿದರು.

ದೇಶ, ದೇಶದ ಜನರ ಹಿತದೃಷ್ಠಿಯಿಂದ ಮಾಡಬೇಕಾದ ತಿದ್ದುಪಡಿಯನ್ನು ತಮ್ಮ ಸ್ವಂತ ಲಾಭಕ್ಕಾಗಿ ಮಾಡಿದರು. ತಮ್ಮ ಹಿತರಕ್ಷಣೆಗಾಗಿ ಇಡೀ ವ್ಯವಸ್ಥೆಯನ್ನೇ ದುರುಪಯೋಗ ಮಾಡಿಕೊಂಡರು. ಸಂವಿಧಾನದ ೩೬೮ನೇ ವಿಧಿಯನ್ನು ತಿದ್ದುಪಡಿ ಮಾಡಲಾಗದು ಎಂದು ನೆಹರೂ ಅವರೇ ಹೇಳಿದ್ದರು. ಆದರೆ ಇಂದಿರಾ ಗಾಂಧಿ ತಮ್ಮ ಕಾಲದಲ್ಲಿ ಇಂತಹ ಮಹತ್ವದ ವಿಧಿಯನ್ನೇ ತಿದ್ದುಪಡಿ ಮಾಡಿದರು. ಆದರೆ ಇಂದು ಬಿಜೆಪಿ ಸಂವಿಧಾನ ಬದಲಿಸುತ್ತದೆ ಎಂದು ಕಾಂಗ್ರೆಸ್ ನವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.

ಸಂವಿಧಾನದ ರಚನೆಗೆ ಮೈಸೂರಿನ ಕೆಲವು ವಿಚಾರಗಳನ್ನು ಬಳಸಿಕೊಳ್ಳಲಾಗಿದೆ. ಹಾಗಾಗಿ ಸಂವಿಧಾನ ಮೈಸೂರು ಸಂಸ್ಥಾನದ ಆಸ್ತಿ. ಇದು ಕನ್ನಡಿಗರ ಹೆಮ್ಮೆಯ ಇತಿಹಾಸ. ಹಾಗಾಗಿ ಇದನ್ನು ಯಾರೂ ಬದಲಿಸಲು ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಸಂವಿಧಾನದ ಆಶಯಗಳನ್ನು ಗೌರವಿಸುವ ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ವಿಕಸಿತ ಭಾರತ ನಿರ್ಮಾಣ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಭಾರತ ಮತ್ತಷ್ಟು ಪ್ರಜ್ವಲಿಸಲಿದೆ. ಇದನ್ನು ಸಹಿಸದ ವಿರೋಧಿಗಳು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಇದನ್ನು ದೇಶದ ಜನತೆ ಅರ್ಥ ಮಾಡಿಕೊಳ್ಳಬೇಕು ಎಂದು ನುಡಿದರು.

ಕಾರ್ಯಕ್ರಮದಲ್ಲಿ ’ಸಂವಿಧಾನ ಬದಲಾಯಿಸಿದ್ದು ಯಾರು?’ ಎಂಬ ಪುಸ್ತಕ ಬಿಡುಗಡೆ ಮಾಡಲಾಯಿತು. ಚಿಂತಕ ಚಕ್ರವರ್ತಿ ಸೂಲಿಬೆಲೆ, ಕೃತಿ ಕರ್ತೃ ವಿಕಾಸ್ ಪುತ್ತೂರು, ಕಾರ್ಯಕ್ರಮದ ಸಂಚಾಲಕ ಮೋಹನ್ ಹಾಜರಿದ್ದರು.

- Advertisement - Ply

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!