ಸಂವಿಧಾನ ಬದಲಿಸುವ ಕುರಿತು ಮೊದಲು ಹೇಳಿದವರೇ ಇಂದಿರಾ ಗಾಂಧಿ: ಚಕ್ರವರ್ತಿ ಸೂಲಿಬೆಲೆ

ಹೊಸದಿಗಂತ ವರದಿ, ಚಿತ್ರದುರ್ಗ

ಸಂವಿಧಾನ ಬದಲಿಸುವ ಕುರಿತು ಇಂದಿರಾ ಗಾಂಧಿ ೧೯೭೬ರಲ್ಲೇ ಹೇಳಿದ್ದಾರೆ. ಇಂದಿರಾ ಗಾಂಧಿ ಒಬ್ಬ ದೇಶಭಕ್ತೆ. ಕಾರಣ ಅವರು ಸಂವಿಧಾನ ಬದಲಾಯಿಸಿದರು ಎಂದು ಪ್ರಿರಂಜನ್ ಮುನ್ಷಿ ಹೇಳಿದ್ದಾರೆ ಎಂದು ಚಿಂತಕ ಹಾಗೂ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟೀಸ್ ಚಿತ್ರದುರ್ಗ ಸಂಘಟನೆ ವತಿಯಿಂದ ನಗರದ ತರಾಸು ರಂಗಮಂದಿರದಲ್ಲಿ ಸಂವಿಧಾನ ಬದಲಾಯಿಸಿದ್ದು ಯಾರು? ಎಂಬ ಪುಸ್ತಕ ಬಿಡುಗಡೆ ಹಾಗೂ ಸಂವಿಧಾನ ಸನ್ಮಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇಶದ ಹಿಂದಿನ ಘಟನಾವಳಿಗಳ ದೃಶ್ಯಗಳನ್ನು ಪ್ರದರ್ಶಿಸಿ ವಿವರಣೆ ನೀಡುತ್ತಾ ಅವರು ಮಾತನಾಡಿದರು.

ಈವರೆಗೆ ಸಂವಿಧಾನಕ್ಕೆ ೧೦೬ ತಿದ್ದುಪಡಿಗಳನ್ನು ಮಾಡಲಾಗಿದೆ. ಅವುಗಳನ್ನು ೭೫ ತಿದ್ದುಪಡಿಗಳನ್ನು ಕಾಂಗ್ರೆಸ್ ಪಕ್ಷದದವರೇ ಮಾಡಿದ್ದಾರೆ. ಅವುಗಳಲ್ಲಿ ನೆಹರು – ೧೬, ಇಂದಿರಾ ಗಾಂಧಿ – ೩೨ಕ್ಕೂ ಹೆಚ್ಚು, ರಾಜೀವ್ ಗಾಂಧಿ – ೧೦ ಸೇರಿದಂತೆ ಒಂದೇ ಕುಟುಂಬದವರು ಒಟ್ಟು ೫೮ ತಿದ್ದುಪಡಿ ಮಾಡಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ – ೧೪, ಇಂದಿನ ಪ್ರಧಾನಿ ನರೇಂದ್ರ ಮೋದಿ ಕಳೆದ ಹತ್ತು ವರ್ಷಗಳಲ್ಲಿ ಕೇವಲ ೮ ತಿದ್ದುಪಡಿ ಮಾಡಿದ್ದಾರೆ ಎಂದು ಎಳೆ ಎಳೆಯಾಗಿ ವಿವರಿಸಿದರು.

ಅಂಬೇಡ್ಕರ್ ರಚಿಸಿದ ಸಂವಿಧಾನದ ಪೀಠಿಕೆಯಲ್ಲಿ ಸಮಾಜವಾದಿ, ಜಾತ್ಯಾತೀತ ಎಂಬ ಪದಗಳು ಇರಲಿಲ್ಲ. ಇಡೀ ಸಂವಿಧಾನವೇ ಜಾತಾತೀತತೆಯಿಂದ ಕೂಡಿದೆ. ಹಾಗಾಗಿ ಇವನ್ನು ಸೇರಿಸುವ ಅಗತ್ಯವಿಲ್ಲ ಎಂದು ವಿರೋಧಿಸಿದ್ದರು. ಆದರೆ ಇಂದಿರಾ ಗಾಂಧಿ ೧೯೭೫ ರಲ್ಲಿ ಸಂವಿಧಾನದ ಹೃದಯದಂತಿದ್ದ ಪೀಠಿಕೆಯನ್ನು ತಿದ್ದುಪಡಿ ಮಾಡಿ ಸಮಾಜವಾದಿ, ಜಾತ್ಯಾತೀತ ಎಂಬ ಪದಗಳನ್ನು ಸೇರಿಸಿದರು. ಅಂದಿನಿಂದ ಇಂದಿನವರೆಗೂ ಅದನ್ನೇ ಸಂವಿಧಾನದ ಪೀಠಿಕೆ ಎಂದು ಓದುತ್ತಾ ಬಂದಿರುವುದು ದುರಂತ. ಈ ಕುರಿತು ಯಾರೂ ಪ್ರಶ್ನೆ ಮಾಡುವ ಗೋಜಿಗೆ ಹೋಗಿಲ್ಲ ಎಂದು ವಿಷಾದಿಸಿದರು.

ಸಂವಿಧಾನ ರಚನಾ ಸಮಿತಿಗೆ ಅಂಬೇಡ್ಕರ್ ಅವರನ್ನು ಸೇರಿಸಿಕೊಳ್ಳಲು ಕಾಂಗ್ರೆಸ್ ಪಕ್ಷದವರು ವಿರೋಧಿಸಿದ್ದರು. ಸಂವಿಧಾನ ರಚನೆಗೆ ಹೆಡ್ವರ್ಡ್ ಜನ್ನಿಂಗ್ ಎಂಬ ಬ್ರಿಟೀಷ್ ವ್ಯಕ್ತಿಯನ್ನು ಕರೆ ತರುವುದಾಗಿ ನೆಹರು ಹೇಳಿದ್ದರು. ಆದರೆ ಸಂವಿಧಾನ ರಚನೆಗೆ ಅಂಬೇಡ್ಕರ್ ಸಮರ್ಥ ವ್ಯಕ್ತಿ ಎಂದು ಗಾಂಧೀಜಿ ಸೂಚಿಸಿದರು. ಇಂತಹ ಮಹತ್ವದ ಸಂವಿಧಾನ ನೀಡಿದ ಅಂಬೇಡ್ಕರ್ ಅವರನ್ನು ಜೀವಿತ ಕಾಲದಲ್ಲಿ ನಿರಂತರವಾಗಿ ಅವಮಾನಿಸಿದ್ದು ಕಾಂಗ್ರೆಸ್ ಪಕ್ಷದವರು ಎಂದು ಹೇಳಿದರು.

ಇಂದಿರಾ ಗಾಂಧಿ ತಮ್ಮ ಅಧಿಕಾರ ಉಳಸಿಕೊಳ್ಳಲು ತುರ್ತು ಪರಿಸ್ಥಿತ ಜಾರಿ ಮಾಡಿದರು. ತನ್ನ ಕುರಿತು ವರದಿ ಮಾಡದಂತೆ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಲಾಯಿತು. ತನ್ನ ವಿರುದ್ಧ ತೀರ್ಪು ನೀಡದಂತೆ ನ್ಯಾಯಾಂಗ ವ್ಯವಸ್ಥೆಯನ್ನೂ ನಿಯಂತ್ರಿಸುವ ಹುನ್ನಾರ ನಡೆಯಿತು. ಕೇವಲ ಕೆಲವೇ ವ್ಯಕ್ತಿಗಳು ಕೈಗೊಂಡ ನಿರ್ಧಾರಕ್ಕೆ ಮಧ್ಯರಾತ್ರಿ ೧೨ ಗಂಟೆ ಸಮಯದಲ್ಲಿ ಸ್ನಾನ ಗೃಹದಲ್ಲಿ ರಾಷ್ಟ್ರಪತಿ ಸಹಿ ಪಡೆಯಲಾಯಿತು. ತರಾತುರಿಯಲ್ಲಿ ತುರ್ತು ಪರಿಸ್ಥಿತಿ ಹೇರಿ ವಿರೋಧ ಮಾಡಿದವರನ್ನೆಲ್ಲ ಜೈಲಿಗೆ ಹಾಕಲಾಯಿತು ಎಂದರು.

ಕಾಂಗ್ರೇಸ್ ಮಾಡಿದ ಕೆಲಸದಿಂದ ಬೇಸತ್ತ ಅಂಬೇಡ್ಕರ್ ಸಂವಿಧಾನವನ್ನೇ ಸುಟ್ಟು ಹಾಕುವುದಾಗಿ ಹೇಳಿದ್ದರು. ’ಸಂವಿಧಾನವೆಂಬ ದೇವಸ್ಥಾನ ಸ್ಥಾಪಿಸಿ ಅದರಲ್ಲಿ ದೇವರುಗಳು ನೆಲೆಸಲಿ ಎಂದು ಬಯಸಿದೆ. ಆದರೆ ದೆವ್ವಗಳು ಬಂದು ನೆಲೆಸುತ್ತಿವೆ. ಹಾಗಾಗಿ ನಾನೇ ಬರೆದ ಸಂವಿಧಾನ ನಾನೇ ಸುಟ್ಟು ಹಾಕಬೇಕೆನಿಸುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದರು. ಆದರೆ ಕಾಂಗ್ರೆಸ್ ಅಧ್ಯಕ್ಷ ದೇವಕಾಂತ್ ಬರೂಕ ‘INDIA IN INDIRA, INDIRA IN INDIA’ ಎಂದು ಹೇಳಿದರು. ದೇಶದ ಸಂವಿಧಾನ ಹಾಗೂ ಅಂಬೇಡ್ಕರ್‌ಗೆ ಕಾಂಗ್ರೇಸ್ ಮಾಡಿದ ಅವಮಾನಕ್ಕೆ ಇದ್ದಕ್ಕಿಂತ ಇನ್ನೇನು ಬೇಕು ಎಂದು ಪ್ರಶ್ನಿಸಿದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!