Thursday, June 1, 2023

Latest Posts

ಕಾಂಗ್ರೆಸ್‌ ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದೆ, ಜೆಡಿಎಸ್‌ ಕಿಂಗ್‌ ಮೇಕರ್‌ ಆಗುವ ಕನಸು ಕಾಣುತ್ತಿದೆ: ಪ್ರತಿಪಕ್ಷಗಳಿಗೆ ಮೋದಿ ಚಾಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಾಂಗ್ರೆಸ್ ಪಕ್ಷ ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದೆ. ಜೆಡಿಎಸ್‌ 15 ಸೀಟು ಗೆದ್ದು ಕಿಂಗ್‌ ಮೇಕರ್‌ ಆಗುವ ಕನಸು ಕಾಣುತ್ತಿದೆ. ಕಾಂಗ್ರೆಸ್, ಜೆಡಿಎಸ್ ಎರಡು ಕುಟುಂಬ ಪಕ್ಷಗಳು. ಜೆಡಿಎಸ್​ಗೆ ಹಾಕುವ ಪ್ರತಿಯೊಂದು ಮತವೂ ಕಾಂಗ್ರೆಸ್​ಗೆ ಹೋಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಭಾನುವಾರ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಸಮಾವೇಶ ಉದ್ದೇಶಿಸಿ ನರೇಂದ್ರ ಮೋದಿ ಮಾತನಾಡಿದರು. ಕರ್ನಾಟಕ ವಿಧಾನಸಭೆ ಚುನಾವಣೆ 2023ಕ್ಕೆ ಪ್ರಚಾರ ನಡೆಸಿದರು. ‘ಈ ಬಾರಿಯ ನಿರ್ಧಾರ ಸಂಪೂರ್ಣ ಬಹುಮತದ ಸರ್ಕಾರ’ ಎಂದು ಪದೇ ಪದೇ ಕನ್ನಡದಲ್ಲಿಯೇ ಹೇಳುವ ಮೂಲಕ ಬಿಜೆಪಿ ಬೆಂಬಲಿಸಿ ಎಂದು ಕರೆ ನೀಡಿದರು.

ಕಾಂಗ್ರೆಸ್​ ಮತ್ತು ಜೆಡಿಎಸ್​ ಹೊರಗಿನಿಂದ ನೋಡಲು ಮಾತ್ರ ಬೇರೆ-ಬೇರೆ ಆದರೆ ಆಂತರಿಕವಾಗಿ ಒಂದೇ. ಜೆಡಿಎಸ್‌ಗೆ ನೀಡುವ ಒಂದೊಂದು ವೋಟು ಸಹ ಕಾಂಗ್ರೆಸ್‌ಗೆ ಸೇರುತ್ತದೆ. ಜೆಡಿಎಸ್‌ ಕಾಂಗ್ರೆಸ್‌ನ ಬಿ ಟೀಂ. ಆದ್ದರಿಂದ ರಾಜ್ಯದಲ್ಲಿ ಡಬಲ್​ ಇಂಜಿನ್​ ಸರ್ಕಾರ ಅಧಿಕಾರಕ್ಕೆ ಬರಬೇಕು. ಜನರು ಬಿಜೆಪಿ ಬೆಂಬಲಿಸಬೇಕು ಎಂದರು.

ಜೆಡಿಎಸ್ ಪಕ್ಷ 15 ಸೀಟು ಗೆದ್ದರೆ​ ನಾವೇ ಕಿಂಗ್​ ಮೇಕರ್ ಎಂದು ಬಹಿರಂಗವಾಗಿ ಹೇಳಿಕೊಳ್ಳುತ್ತಾರೆ. ಇವರ ಸ್ವಾರ್ಥ ರಾಜಕೀಯದಿಂದ ಒಂದು ಕುಟುಂಬಕ್ಕೆ ಮಾತ್ರ ಲಾಭವಾಗುತ್ತದೆ. ಆದರೆ ರಾಜ್ಯದ ಅನೇಕ ಕುಟುಂಬಗಳಿಗೆ ನಷ್ಟವಾಗುತ್ತದೆ ಎಂದು ಪ್ರಧಾನಿ ಆರೋಪಿಸಿದರು.

ಕಾಂಗ್ರೆಸ್ ಚನ್ನಪಟ್ಟಣದ ಪರಂಪರೆಯ ಉದ್ಯೋಗವನ್ನು ಹಾಳು ಮಾಡಿತ್ತು. ಕಡಿಮೆ ದರದ ಕಳಪೆ ವಿದೇಶಿ ಗೊಂಬೆಗಳನ್ನು ಮಾರುಕಟ್ಟೆಗೆ ಬರುವಂತೆ ಮಾಡಿದ್ದೇ ಕಾಂಗ್ರೆಸ್. ಮನ್ ಕಿ ಬಾತ್​ನಲ್ಲಿ ಇಲ್ಲಿನ ಗೊಂಬೆಗಳ ಬಗ್ಗೆ ಮಾತನಾಡಿದ್ದೆ. ಭಾರತದ ಗೊಂಬೆಗಳನ್ನು ಖರೀದಿಸಲು ನಾವು ಪ್ರೋತ್ಸಾಹ ನೀಡಿದ್ದೆವು. ಬಳಿಕ 1000 ಕೋಟಿ ರೂ. ಮೌಲ್ಯದ ಗೊಂಬೆಗಳ ರಪ್ತು ಆಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!